ಸಿದ್ದಾಪುರ: ಭಾರೀ ಗಾಳಿ ಮಳೆ; ಕಾರು, ಎರಡು ಮನೆಗಳಿಗೆ ಹಾನಿ

Update: 2018-08-13 18:24 GMT

ಸಿದ್ದಾಪುರ (ಕೊಡಗು), ಆ.13: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ನಡುವೆ ಸೋಮವಾರ ಸಂಜೆ ಸಿದ್ದಾಪುರ ಸುತ್ತ ಮುತ್ತಲಿನಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಮರ ಬಿದ್ದು ಒಂದು ಕಾರು ಸೇರಿದಂತೆ ಎರಡು ಮನೆಗಳಿಗೆ ಹಾನಿಯಾಗಿರುವ ಘಟನೆ ಸಂಭವಿಸಿದೆ.

ಕೂಡುಗದ್ದೆಯ ನಿವಾಸಿ ಸುನಿಲ್ ಎಂಬವರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಪಕ್ಕದ ಎರಡು ಮನೆಗಳಿಗೆ ಹಾನಿ‌ ಸಂಭವಿಸಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮರಗೋಡು ಮಡಿಕೇರಿ ಮುಖ್ಯ ರಸ್ತೆಯ ಹೊಸ್ಕೇರಿ ಹಾಗೂ ಚೆಟ್ಟಳ್ಳಿ ಮಡಿಕೇರಿ ಮುಖ್ಯ ರಸ್ತೆಯ ಕಾನನ್ಕಾಡಿನಲ್ಲಿ ರಸ್ತೆ ಮದ್ಯದಲ್ಲಿ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಳಿಕ ಸ್ಥಳೀಯರ ಸಹಾಯದಿಂದ ಮರಗಳನ್ನು ತೆರವುಗೊಳಿಸಿದರು. ಇನ್ನು ಹಲವೆಡೆ ರಸ್ತೆಗೆ ಮರಗಳು ಉರುಳಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು, ಸಿದ್ದಾಪುರ ಸುತ್ತ ಮುತ್ತಲಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News