ಮಹಾದಾಯಿ ತೀರ್ಪು ಪ್ರಕಟ: ಕರ್ನಾಟಕಕ್ಕೆ 5.5 ಟಿಎಂಸಿ ಕುಡಿಯುವ ನೀರು

Update: 2018-08-14 11:31 GMT

ಬೆಂಗಳೂರು, ಆ. 14: ಕರ್ನಾಟಕಕ್ಕೆ 5.5 ಟಿಎಂಸಿ ಕುಡಿಯುವ ನೀರು ನೀಡುವಂತೆ ಮಹಾದಾಯಿ ನ್ಯಾಯಾಧಿಕರಣ ಮಂಗಳವಾರ ತೀರ್ಪು ಪ್ರಕಟಿಸಿ ಆದೇಶಿಸಲಾಗಿದೆ. ಆದರೆ ಕರ್ನಾಟಕ 7 ಟಿಎಂಸಿ ನೀರು ನೀಡುವಂತೆ ಕೇಳಿಕೊಂಡಿತ್ತು. ಮಳೆಗಾಲದಲ್ಲಿ ಮಹಾದಾಯಿ ಕಣಿವೆಯಿಂದ ಮಲಪ್ರಭಾ ಕಣಿವೆಗೆ ನೀರು ಹರಿಯಲಿದೆ.

ಕರ್ನಾಟಕ ಒಟ್ಟು 36 ಟಿಎಂಸಿ ನೀರು ಬಿಡುವಂತೆ ಕೇಳಿತ್ತು. ಆದರೆ, ಇದೀಗ ಕುಡಿಯುವ ನೀರಿಗೆ 5.5 ಟಿಎಂಸಿ ಹಾಗೂ ಜಲವಿದ್ಯುತ್ ಉತ್ಪಾದನೆಗೆ 8 ಟಿಎಂಸಿ ಸೇರಿದಂತೆ ಒಟ್ಟು 13.5 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನ್ಯಾಯಾಧಿಕರಣ ಹಂಚಿಕೆ ಮಾಡಿದೆ.

ಮಂಗಳವಾರ ಸಂಜೆ 4ಕ್ಕೆ ಮಹಾದಾಯಿ ಕುರಿತು ನ್ಯಾಯಾಧಿಕರಣ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮಹಾದಾಯಿ ಹೋರಾಟ ನಡೆಯುತ್ತಿರುವ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ನರಗುಂದ ಹಾಗೂ ನವಲಗುಂದ ಮಾರ್ಗದಲ್ಲಿ ಸಂಚರಿಸುವ ಬಸ್ ಸ್ಥಗಿತಕ್ಕೆ ಪೊಲೀಸ್ ಇಲಾಖೆಯಿಂದ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ತೀರ್ಪು ಹಿನ್ನೆಲೆಯಲ್ಲಿ ಮುನ್ನೆಚರಿಕಾ ಕ್ರಮವಾಗಿ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದು, 3 ಗಂಟೆಯಿಂದ ಬಸ್ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News