‘ಮಹಾದಾಯಿ ತೀರ್ಪು’ ಕೊಂಚ ನಿರಾಳ ನೀಡಿದೆ: ಡಾ.ಜಿ.ಪರಮೇಶ್ವರ್

Update: 2018-08-14 14:01 GMT

ಬೆಂಗಳೂರು, ಆ.14: ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಧೀಕರಣ ನೀಡಿರುವ ತೀರ್ಪು ರಾಜ್ಯದ ಜನರಿಗೆ ಕೊಂಚ ನಿರಾಳತೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವು 36.4 ಟಿಎಂಸಿ ನೀರನ್ನು ಕೇಳಿತ್ತು. ಆದರೆ, 13.5 ಟಿಎಂಸಿ ನೀರು ಹಂಚಿಕೆ ಮಾಡಿ ತೀರ್ಪು ನೀಡಲಾಗಿದೆ ಎಂದರು. ಇಷ್ಟು ವರ್ಷದ ಹೋರಾಟಕ್ಕೆ ಈ ತೀರ್ಪು ಸ್ವಲ್ಪ ಮಟ್ಟಿಗೆ ನಿರಾಳತೆ ನೀಡಿದೆ. ಆದರೆ, ಇನ್ನು 10 ಟಿಎಂಸಿ ನೀರು ಹೆಚ್ಚುವರಿ ನೀಡಿದ್ದರೆ ಸಂತೋಷವಿತ್ತು. ಈ ತೀರ್ಪಿನ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಿ, ಮರು ಅರ್ಜಿ ಸಲ್ಲಿಕೆ ಬಗ್ಗೆಯೂ ಚಿಂತನೆ ಮಾಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಹಲವು ವರ್ಷದಿಂದ ಮಹಾದಾಯಿ ವಿಚಾರವಾಗಿ ಸಾಕಷ್ಟು ಹೋರಾಟ, ಸಭೆ ನಡೆದಿದೆ. ಈ ವಿವಾದ ಪರಿಹರಿಸಲು ಪ್ರಧಾನಿ ನರೇಂದ್ರಮೋದಿ ಮಧ್ಯಸ್ಥಿಕೆ ವಹಿಸುವಂತೆ ಕೇಳಿದ್ದೆವು. ಆದರೆ, ಅವರು ನ್ಯಾಯಾಲಯದ ಮುಂದೆ ಹೋಗುವಂತೆ ಹೇಳಿದ್ದರು ಎಂದು ಅವರು ತಿಳಿಸಿದರು.

ಗೋವಾರ ಸರಕಾರವು ನ್ಯಾಯಾಧೀಕರಣದ ಈ ತೀರ್ಪಿಗೆ ಬೇಸರ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಗೋವಾಗೆ 24 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಅವರು ಈ ತೀರ್ಪಿಗೆ ತೃಪ್ತಿಪಟ್ಟುಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News