ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳಾಂತರಕ್ಕೆ ಅವಕಾಶವಿಲ್ಲ: ಸದಾನಂದಗೌಡ

Update: 2018-08-14 14:04 GMT

ಬೆಂಗಳೂರು, ಆ.14: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡದಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ 1996ರಿಂದ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದೆಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ನಾವೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ವೈಮಾನಿಕ ಕ್ಷೇತ್ರದ ಉತ್ಪಾದನೆಯ ಶೇ.50ರಷ್ಟನ್ನು ಬೆಂಗಳೂರಿನಲ್ಲಿ ತಯಾರಿಸಲಾಗುತ್ತಿದ್ದು, ಈ ಪ್ರದರ್ಶನಕ್ಕೆ ಬೇಕಾದ ಎಲ್ಲ ಮೂಲಸೌಕರ್ಯಗಳು ಈಗಾಗಲೇ ಲಭ್ಯವಿದ್ದು, ರಾಜ್ಯದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.

ಈ ಸಂಬಂಧ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸಿದ್ದು, ಬೆಂಗಳೂರಲ್ಲದೆ, ಉತ್ತರಪ್ರದೇಶ, ರಾಜಸ್ತಾನ, ಗೋವಾ ಸೇರಿದಂತೆ ಅನೇಕ ರಾಜ್ಯಗಳು ಈ ವೈಮಾನಿಕ ಪ್ರದರ್ಶನವನ್ನು ತಮ್ಮಲ್ಲಿ ನಡೆಸುವಂತೆ ಬೇಡಿಕೆ ಸಲ್ಲಿಸಿವೆ. ಆದರೆ, ಇದನ್ನು ಬೆಂಗಳೂರಿಂದ ಸ್ಥಳಾಂತರಿಸುವ ಬಗ್ಗೆ ಯಾವುದೇ ಖಚಿತ ನಿರ್ಧಾರವಾಗಿಲ್ಲವೆಂದು ತಿಳಿಸಿರುವುದಾಗಿ ಸದಾನಂದಗೌಡ ಹೇಳಿದ್ದಾರೆ.

ಅಲ್ಲದೆ ಈ ಸಂಬಂಧ ಪ್ರಧಾನಮಂತ್ರಿಯ ಗಮನಕ್ಕೂ ತರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಕ್ಷಣಾ ಸಚಿವರು ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದು, ವೈಮಾನಿಕ ಪ್ರದರ್ಶನ ಸ್ಥಳಾಂತರಿಸುವಂತಹ ಯಾವುದೇ ಬೆಳವಣಿಗೆಗಳು ಮುಜುಗರ ತರುವುದಲ್ಲದೆ, ತಾವು ಪ್ರತಿನಿಧಿಸುವ ರಾಜ್ಯವನ್ನು ನಿರ್ಲಕ್ಷಿಸಿದಂತಾಗುವುದೆಂದು ಅವರ ಗಮನಕ್ಕೆ ತಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಈ ವೈಮಾನಿಕ ಪ್ರದರ್ಶನವನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಸಾಧ್ಯವಿಲ್ಲವೆಂದು ಕೇಂದ್ರ ರಕ್ಷಣಾ ಸಚಿವರ ಗಮನಕ್ಕೆ ತರಲಾಗಿದ್ದು, ಕೂಡಲೆ ಬೆಂಗಳೂರಿನಲ್ಲೆ ಈ ಪ್ರದರ್ಶನ ನಡೆಸುವ ಬಗ್ಗೆ ಪ್ರಕಟನೆ ಹೊರಡಿಸಬೇಕೆಂದು ಕೋರಲಾಗಿದೆ. ಅಲ್ಲದೆ, ಅಗತ್ಯವಿದ್ದಲ್ಲಿ, ಈ ಸಂಬಂಧ ಬೆಂಗಳೂರಿನ ಸಂಸದರೊಡನೆ ಪ್ರಧಾನಮಂತ್ರಿಯನ್ನು ಭೇಟಿಯಾಗಲಾಗುವುದು ಎಂದು ಸದಾನಂದಗೌಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News