ಉತ್ತರ ಕರ್ನಾಟಕ ಸಂಭ್ರಮ ಪಡುವ ಆದೇಶವಲ್ಲ: ಮಾಜಿ ಸಚಿವ ಎಚ್.ಕೆ.ಪಾಟೀಲ್

Update: 2018-08-14 14:43 GMT

ಹುಬ್ಬಳ್ಳಿ, ಆ.14: ಮಹಾದಾಯಿ ಜಲ ವಿವಾದ ಕುರಿತು ನ್ಯಾಯಾಧೀಕರಣ ನೀಡಿರುವ ಆದೇಶವು ಉತ್ತರ ಕರ್ನಾಟಕ ಭಾಗದ ಜನ ಸಂಭ್ರಮಪಡುವಂತದ್ದಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನ್ಯಾಯಾಧೀಕರಣದ ತೀರ್ಪು ನನಗೆ ಬೇಸರ ತಂದಿದೆ. 188 ಟಿಎಂಸಿ ನೀರಿನಲ್ಲಿ ನಮಗೆ ನೀಡಿದ್ದು ಕೇವಲ 5.5 ಟಿಎಂಸಿ ಮಾತ್ರ(ಕುಡಿಯುವ ಉದ್ದೇಶಕ್ಕಾಗಿ) ಎಂದರು.

ನ್ಯಾಯಾಧೀಕರಣದ ನಡವಳಿಕೆಯೂ ನನಗೆ ಬೇಸರ ತಂದಿದೆ. ನ್ಯಾಯಾಧೀಕರಣ ಮೊದಲು ಆದೇಶ ನೀಡಬೇಕು. ಬಳಿಕ ಸರಕಾರಕ್ಕೆ ಆದೇಶದ ಪ್ರತಿಗಳನ್ನು ಸಲ್ಲಿಸಬೇಕು. ಆದರೆ, ಮೊದಲು ಸರಕಾರಕ್ಕೆ ವರದಿ ಸಲ್ಲಿಸಿ ಆನಂತರ ಆದೇಶ ನೀಡಿರುವುದು ನ್ಯಾಯಾಧೀಕರಣಕ್ಕೆ ಶೋಭೆ ತರುವುದಿಲ್ಲ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ನಮಗೆ ಸಿಕ್ಕಿರುವ ದೊಡ್ಡ ಜಯ 5.5 ಟಿಎಂಸಿ ನೀರು ಸಿಕ್ಕಿರುವುದಲ್ಲ, ಬದಲಾಗಿ ಮಹಾದಾಯಿಯಲ್ಲಿ 188 ಟಿಎಂಸಿ ನೀರು ಇದೆ ಎಂದು ನ್ಯಾಯಾಧೀಕರಣ ಒಪ್ಪಿಕೊಂಡಿರುವುದು. ನಮ್ಮ ಬೇಡಿಕೆ ಹಾಗೆ ನೀರು ಹಂಚಿಕೆ ಆಗಿಲ್ಲ. ಸಂಪೂರ್ಣ ಆದೇಶ ಪ್ರತಿ ಸಿಕ್ಕ ಬಳಿಕ ಮುಂದಿನ ಹೋರಾಟ ಮಾಡುವೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಸಲಹೆಯನ್ನು ನೀಡುವೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News