ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವಂತೆ ಸಚಿವ ಆರ್.ವಿ.ದೇಶಪಾಂಡೆ ಸೂಚನೆ

Update: 2018-08-14 14:59 GMT

ಧಾರವಾಡ, ಆ.14: ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಜಿಲ್ಲೆಯ ಗ್ರಾಮೀಣ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳು ಜರುಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಬೇಕು ಎಂದು ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದ್ದಾರೆ.

ಮಂಗಳವಾರ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಕಂದಾಯ ಇಲಾಖೆ ಹಾಗೂ ಪ್ರಕೃತಿ ವಿಕೋಪ ಪರಿಹಾರ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೂಂಡಾ ಪ್ರವೃತ್ತಿ ತೋರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಜನಸಾಮಾನ್ಯರ ಸಮಸ್ಯೆಗಳಿಗೆ ಮಾನವೀಯತೆಯಿಂದ ಸ್ಪಂದಿಸಬೇಕು ಎಂದು ದೇಶಪಾಂಡೆ ಹೇಳಿದರು.

ಕಳ್ಳತನ, ಮಟ್ಕಾ, ಡ್ರಗ್ಸ್, ಗಾಂಜಾ ಅಪರಾಧಗಳಲ್ಲಿ ತೊಡಗಿರುವ ಮತ್ತು ಪರವಾನಿಗೆ ಇಲ್ಲದೆ ಆಯುಧ ಹೊಂದಿರುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅಮಾಯಕರ ಆಸ್ತಿ ಲಪಟಾಯಿಸುವವರು, ಗೂಂಡಾಗಿರಿ ಪ್ರವೃತ್ತಿ ಹೊಂದಿರುವ ಯಾವುದೇ ವ್ಯಕ್ತಿಯಾಗಿರಲಿ ಅವರ ಪಕ್ಷ, ಜಾತಿ, ಧರ್ಮ, ಪ್ರಭಾವ ನೋಡದೇ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸುವಂತೆ ಅವರು ಆದೇಶಿಸಿದರು. ಜನರಿಗೆ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕೆಂದು ದೇಶಪಾಂಡೆ ಇದೇ ಸಂದರ್ಭದಲ್ಲಿ ವಿನಂತಿಸಿದರು.

ಬೆಳೆವಿಮೆ ಪಾವತಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ಬ್ಯಾಂಕರ್‌ಗಳು ಕಾರಣವಾಗಬಾರದು. ರೈತರ ಖುಷ್ಕಿ ಭೂಮಿಯನ್ನು ನೀರಾವರಿ ಭೂಮಿ ಎಂದು ತಪ್ಪಾಗಿ ದಾಖಲಿಸಿದ ಪರಿಣಾಮ ಅನೇಕ ರೈತರಿಗೆ ಅವರ ಬೆಳೆವಿಮೆ ಪಡೆಯಲು ತೊಂದರೆಯಾಗುತ್ತಿದೆ. ಇಂತಹ ವಿಷಯದಲ್ಲಿ ಬ್ಯಾಂಕ್‌ಗಳು ಜವಾಬ್ದಾರಿಯಿಂದ ವರ್ತಿಸಬೇಕು. ಅಧಿಕಾರಿಗಳೆಲ್ಲರೂ ಒಂದು ಮನೆಯ ಸದಸ್ಯರ ಹಾಗೆ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಸೌಜನ್ಯದಿಂದ ಜನಸಾಮಾನ್ಯರೊಂದಿಗೆ ವರ್ತಿಸಬೇಕು. ಅಧಿಕಾರ ಶಾಶ್ವತವಲ್ಲ. ಯಾವುದೇ ಕಚೇರಿಗಳಲ್ಲಿ ಜನತೆ ನಿಂತುಕೊಂಡು ಮಾತನಾಡುವ ಪರಿಸ್ಥಿತಿ ಇರಬಾರದು. ಅವರನ್ನು ಕೂರಿಸಿ ಮಾತನಾಡುವ ಸೌಜನ್ಯ ಬೆಳೆಸಿಕೊಳ್ಳಬೇಕು. ಸಾಧ್ಯವಾದಷ್ಟು ಎಲ್ಲ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸಬೇಕು ಎಂದು ಅವರು ಹೇಳಿದರು.

ಪ್ರತಿ ಮೂವತ್ತು ವರ್ಷಗಳಿಗೊಮ್ಮೆ ಭೂಮಿಯ ಸರ್ವೇ ಆಗಬೇಕು. ಡ್ರೋನ್ ಮೂಲಕ ಈ ಬಾರಿ ಸರ್ವೇ ಕಾರ್ಯ ಮಾಡಲು ಪ್ರಯತ್ನಿಸಲಾಗುತ್ತಿದೆ. ಸಾಧ್ಯವಾದಷ್ಟು ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೆಲವು ಎನ್.ಜಿ.ಓ.ಗಳಿಗೆ ಭೂ ದಾಖಲೆಗಳನ್ನು ನೀಡಲು ಅನುಮತಿ ಕೊಡಲಾಗಿದೆ. ಅಲ್ಲಿ ಅವ್ಯವಹಾರಗಳು ನಡೆಯದಂತೆ ಎಚ್ಚರ ವಹಿಸಬೇಕು. ಭೂ ಪರಿವರ್ತನೆ ಕಾರ್ಯವನ್ನು ಕನಿಷ್ಠ ದಾಖಲೆಗಳನ್ನು ಪಡೆದು ಹದಿನೈದು ದಿನಗಳಲ್ಲಿ ಪೂರ್ಣ ಗೊಳಿಸಬೇಕು ಎಂದು ದೇಶಪಾಂಡೆ ಸೂಚಿಸಿದರು.

ಗಾಂಧೀ ಜಯಂತಿ ಸಂದರ್ಭದಲ್ಲಿ ಸ್ವಚ್ಛತಾ ಸಪ್ತಾಹ: ಈ ಬಾರಿ ಅಕ್ಟೋಬರ್ 2ರ ಗಾಂಧೀ ಜಯಂತಿಯ ಮುನ್ನ ಒಂದು ವಾರ ಹಳ್ಳಿಗಳಿಂದ ಸ್ವಚ್ಛತಾ ಅಭಿಯಾನ ಆರಂಭಿಸಬೇಕು. ಒಂದು ವಾರಗಳ ಕಾಲ ವಿವಿಧ ಶಾಲಾ, ಕಾಲೇಜುಗಳು, ಸರಕಾರಿ ಕಟ್ಟಡಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಸಾರ್ವಜನಿಕರು, ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಅಕ್ಟೋಬರ್ 2 ರಂದು ಗಾಂಧೀಜಯಂತಿಯಂದು ಜಿಲ್ಲಾ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆಸಬೇಕು ಎಂದು ಜಿಲ್ಲಾಧಿಕಾರಿಗೆ ದೇಶಪಾಂಡೆ ಸೂಚಿಸಿದರು. ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಶಾಸಕರಾದ ಸಿ.ಎಸ್.ಶಿವಳ್ಳಿ, ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಸರಾಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News