ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ: ಎಚ್.ಡಿ.ರೇವಣ್ಣ

Update: 2018-08-14 16:01 GMT

ಬೆಂಗಳೂರು, ಆ.14: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ, ರಾಜ್ಯದಲ್ಲೆ ಇದ್ದು ಇಲ್ಲಿನ ಜನರ ಸೇವೆ ಮಾಡುತ್ತಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಮಂಗಳವಾರ ನಗರದಲ್ಲಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಮುಖ್ಯಮಂತ್ರಿಯಾಗಬೇಕೆಂದು ಕನಸಿನಲ್ಲೂ ಭಾವಿಸಿಲ್ಲ. ಪಕ್ಷ ನನಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿದ್ದೇನೆ ಎಂದು ರೇವಣ್ಣ ಹೇಳಿದರು.

ಈಶ್ವರಪ್ಪ ವಿರುದ್ಧ ವಾಗ್ದಾಳಿ: ಸರಕಾರಿ ನೌಕರರು ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆದಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಈ ಸಂಬಂಧ ದಾಖಲೆಗಳಿದ್ದರೆ ನೀಡಲಿ, ಇಲ್ಲದಿದ್ದರೆ ಬಾಯಿಮುಚ್ಚಿಕೊಂಡು ಇರಲಿ ಎಂದು ವಾಗ್ದಾಳಿ ನಡೆಸಿದರು.

ಶಿಫಾರಸ್ಸು ಪತ್ರಗಳನ್ನು ನೀಡಿ ನನ್ನ ಇಲಾಖೆಯ ಹಲವಾರು ಅಧಿಕಾರಿಗಳನ್ನು ಈಶ್ವರಪ್ಪ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಅವರು ಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗ ಮಾಡಲಿ. ಉಪ ಮುಖ್ಯಮಂತ್ರಿಯ ಸ್ಥಾನ ಅಲಂಕರಿಸಿದ್ದ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಗೌರವಯುತವಾಗಿ ವರ್ತಿಸಬೇಕು. ವರ್ಗಾವಣೆಗಾಗಿ ನಾನು ಯಾರಿಂದಲೂ ಹಣ ಪಡೆದಿಲ್ಲ, ಪಡೆಯುವುದು ಇಲ್ಲ ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾನಿಗೀಡಾಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳನ್ನು ದುರಸ್ತಿಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ರೇವಣ್ಣ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶ್‌ಬಾಬು, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನನ್ನ ಮಗ ಪ್ರಜ್ವಲ್ ರೇವಣ್ಣ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾನೆ. ಲೋಕಸಭಾ ಚುನಾವಣೆಯಲ್ಲಿ ಆತನನ್ನು ಕಣಕ್ಕಿಳಿಸುವ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತೀರ್ಮಾನ ಕೈಗೊಳ್ಳುತ್ತಾರೆ.

-ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News