×
Ad

ಸಕಲೇಶಪುರ: ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ

Update: 2018-08-14 22:34 IST

ಸಕಲೇಶಪುರ,ಆ.14: ತಾಲೂಕಿನಾದ್ಯಂತ ಕಳೆದ ಇಪ್ಪತ್ತನಾಲ್ಕು ಗಂಟೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸೋಮವಾರ ಮುಂಜಾನೆಯಿಂದ ಮಂಗಳವಾರ ಮುಂಜಾನೆವರಗೆ ತಾಲೂಕಿನಲ್ಲಿ 300 ಮೀ.ಮೀಟರ್ ಗೂ ಅಧಿಕ ಮಳೆಯಾಗಿರುವ ಪರಿಣಾಮ ತಾಲೂಕಿನ ಜೀವನದಿ ಹೇಮಾವತಿ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರು ಹರಿಯುತ್ತಿದೆ. ನದಿ ನೀರು ಭತ್ತದ ಗದ್ದೆಗಳಿಗೆ ವ್ಯಾಪಿಸಿದ್ದು,  ನೂರಾರು ಎಕರೆ ಭತ್ತದ ಗದ್ದೆಗಳು ಮುಳುಗಡೆಯಾಗಿವೆ. ಅಲ್ಲದೆ ತಾಲೂಕಿನ ಎಲ್ಲೆಡೆ ಭತ್ತದ ಗದ್ದೆಗಳು ನದಿ ನೀರಿನಿಂದ ಅವೃತ್ತವಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ತಾಲೂಕಿನ ಹಾಡ್ಯ ಹಾಗೂ ಹಾಡ್ಲಹಳ್ಳಿ ಗ್ರಾಮದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, 50 ಎಕರೆಗೂ ಅಧಿಕ ಭತ್ತದ ಗದ್ದೆ, ಕಾಫಿ ತೋಟಗಳು ಸಂಪೂರ್ಣ ನಾಶವಾಗಿದೆ. 

ಹೆದ್ದಾರಿ ಬಂದ್: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸೋಮವಾರ ಮದ್ಯಾಹ್ನದಿಂದ ನಿರಂತರ ಭೂಕುಸಿತ ಸಂಭವಿಸುತ್ತಿದ್ದು, ಮಂಗಳವಾರ ಮದ್ಯರಾತ್ರಿ ಭೂಕುಸಿತ ಸಂಭವಿಸಿದ್ದರಿಂದ ರಾತ್ರಿ ವೇಳೆ ಸಂಚರಿಸುವ ಸಾರಿಗೆ ಬಸ್‍ಗಳು ಸೇರಿದಂತೆ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಸಾವಿರಾರು ವಾಹನಗಳು ರಸ್ತೆ ಎರಡು ಬದಿಯಲ್ಲಿ ಸುಮಾರು ದೂರದವರಗೆ ನಿಂತಿದ್ದು, ಅತಿಯಾದ ಮಳೆಯಿಂದಾಗಿ ಪ್ರಮಾಣಿಕರು ವಾಹನಗಳಿಂದ ಇಳಿಯಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಂಗಳವಾರ ಮುಂಜಾನೆ ಕಾರ್ಯಚರಣೆ ನಡೆಸಿದ ಪೋಲಿಸರು ದೊಡ್ಡತಪ್ಪಲೆ ಗ್ರಾಮ ಸಮೀಪ ಹೆದ್ದಾರಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ಮಾರನಹಳ್ಳಿ, ರಾಜಘಾಟ್, ಡಬಲ್ ತಿರುವು ಕೆಂಪುಹೊಳೆ ಸೇರಿದಂತೆ 8 ಸ್ಥಳದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಮಂಗಳೂರಿಗೆ ತೆರಳುವ ಬಸ್‍ಗಳನ್ನು ಸಕಲೇಶಪುರಕ್ಕೆ ವಾಪಸು ಕಳುಹಿಸಿದ್ದು, ಸಕಲೇಶಪುರದಿಂದ ಹಲವು ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ತಮ್ಮ ಸ್ಥಳಕ್ಕೆ ತೆರಳಿದರು.

ಬಸ್‍ಗಳ ಮೇಲೆ ಕುಸಿದ ಗುಡ್ಡ: ರಾಷ್ಟ್ರೀಯ ಹೆದ್ದಾರಿ 75 ರ ದೊಡ್ಡತಪ್ಪಲೆ ಗ್ರಾಮ ಸಮೀಪ ಸೋಮವಾರ ಮದ್ಯರಾತ್ರಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ಗುಡ್ಡ ಕುಸಿದಿದ್ದು, ಅದೃಷ್ಟವಶ ಯಾವುದೆ ಅಪಾಯ ಸಂಭವಿಸಿಲ್ಲ. ಮಂಗಳವಾರ ಮದ್ಯಾಹ್ನ 12 ಗಂಟೆಯ ವೇಳೆ ಚಲಿಸುತ್ತಿದ್ದ ಎರಡು ಖಾಸಗಿ ಬಸ್ ಹಾಗೂ ಒಂದು ಕೆಎಸ್‍ಆರ್‍ಟಿಸಿ ಬಸ್ ಮೇಲೆ ಗುಡ್ಡ ಕುಸಿದಿದ್ದರಿಂದ ಸುಮಾರು 40 ಜನರಿದ್ದ ಕೆಎಸ್‍ಆರ್‍ಟಿಸಿ ಬಸ್ ಪ್ರಪಾತಕ್ಕೆ ಬೀಳುವುದು ಅಲ್ಪದರಲ್ಲಿ ತಪ್ಪಿದೆ. ಮತ್ತೊಂದು ಕೆಎಸ್‍ಆರ್‍ಟಿಸಿ ಬಸ್ ಭಾಗಶಃ ಮಣ್ಣಿನಲ್ಲಿ ಹೊತು ಹೋಗಿದ್ದು, ಖಾಸಗಿ ಬಸ್ ಸಹ ಜಖಂಗೊಂಡಿದೆ. ಆದರೆ ಪ್ರಯಾಣಿಕರಿಗೆ ಯಾವುದೆ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ಹೆದ್ದಾರಿಯಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಾಹನಗಳು ಮುಂದೆ ಸಾಗಲು ಆಗದೆ ಹಿಂದೆ ಹೋಗಲೂ ಆಗದೆ ಸೋಮವಾರ ಮಧ್ಯರಾತ್ರಿಯಿಂದ ಊಟ ತಿಂಡಿ ಇಲ್ಲದೆ ದಿನ ದೂಡುತ್ತಿದ್ದು, ಇವರಿಗೆ ಸಕಲೇಶಪುರದಿಂದ ಆಹಾರ ಪೊರೈಕೆ ಮಾಡಲಾಯಿತು. 

ರಾಜ್ಯ ಹೆದ್ದಾರಿಯಲ್ಲೆ ಅಂತರ್ಜಲ: ರಾಜ್ಯ ಹೆದ್ದಾರಿ 27 ರ ಕೊಡಗು-ಸುಬ್ರಮಣ್ಯ ಸಂಪರ್ಕ ಕಲ್ಪಿಸುವ ಬಿಸ್ಲೆಘಾಟ್‍ನ ರಾಜ್ಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಅಂತರ್ಜಲ ಉಕ್ಕುತ್ತಿದ್ದು, ಹಲವೇಡೆ ಭೂಕುಸಿತ ಸಂಭವಿಸಿರುವ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ.

ರೈಲು ಸಂಚಾರ ಸ್ಥಗಿತ: ಸಕಲೇಶಪುರ-ಸುಬ್ರಮಣ್ಯ ರೈಲ್ವೆ ರಸ್ತೆಯ ಮೂರು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದರಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಾಗುವ ಪ್ರಯಾಣಿಕರ ರೈಲನ್ನು ಹಾಸನದಲ್ಲೆ ತಡೆಹಿಡಿದು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲನ್ನು ಸುಬ್ರಮಣ್ಯದಿಂದ ವಾಪಸ್ ಕಳುಹಿಸಲಾಗಿದ್ದು, ತೆರವು ಕಾರ್ಯಚರಣೆ ನಡೆಯುತ್ತಿದೆ. 

ವೀಕ್ಷಣೆ: ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿರುವ ಪ್ರದೇಶಗಳಿಗೆ ಶಾಸಕ ಎಚ್.ಕೆ ಕುಮಾರಸ್ವಾಮಿ ಹಾಗೂ ಜಿಪಂ ಉಪಾಧ್ಯಕ್ಷ ಸುಪ್ರದೀಪ್ತ ಯಜಮಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News