ಹನೂರು: ಆನೆ ದಾಳಿಗೆ ರೈತ ಬಲಿ
ಹನೂರು,ಆ.14: ಆನೆ ತುಳಿತಕ್ಕೊಳಗಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಪೂನ್ನಾಚ್ಚಿ ಸಮೀಪದ ಮರೂರು ಗ್ರಾಮದಲ್ಲಿ ನಡೆದಿದೆ.
ಸಿದ್ದಪ್ಪ(49) ಮೃತ ರೈತ. ಇವರು ಸೋಮವಾರ ರಾತ್ರಿ ಹೊಲದಲ್ಲಿ ತಾನು ಬೆಳೆದಿದ್ದ ರಾಗಿ ಫಸಲಿನ ಬೆಳೆಯ ಕಾವಲಿಗಾಗಿ ತೆರಳಿದ್ದಾಗ ತಡ ರಾತ್ರಿ ಜಮೀನಿಗೆ ಲಗ್ಗೆ ಹಿಟ್ಟ ಆನೆಯೊಂದು ಫಸಲನ್ನು ನಾಶ ಮಾಡಿದ್ದಲ್ಲದೆ, ಇವರ ಮೇಲೆಯೂ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ.
ಆಕ್ರೋಶ: ಆನೆ ದಾಳಿಯಿಂದ ಮೃತ ಪಟ್ಟ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡರು. ಹಲ್ಲೆಗೂ ಸಹ ಮುಂದಾದ ಘಟನೆ ನಡೆಯಿತು.
ಮೃತ ಕುಟಂಬಕ್ಕೆ ಪರಿಹಾರ: ಸ್ಥಳಕ್ಕೆ ಆಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಮತ್ತು ಮ. ಮ ಬೆಟ್ಟ ಅರಣ್ಯ ಅಧಿಕಾರಿ ಪ್ರಶಾಂತ್‍ಕುಮಾರ್ ಮೃತನ ಕುಟಂಬಕ್ಕೆ ಸಾಂತ್ವನ ಹೇಳಿ ಗ್ರಾಮಸ್ಥರ ಜೊತೆ ಚರ್ಚಿಸಿ ಮೃತನ ಕುಟಂಬಕ್ಕೆ ಪರಿಹಾರವಾಗಿ 5 ಲಕ್ಷ ಘೋಷಿಸಿ ಸ್ಥಳದಲ್ಲಿಯೇ 3 ಲಕ್ಷ ರೂ. ಚೆಕ್ ನೀಡಿದರು. ಫಸಲು ನಾಶಕ್ಕೆ 1 ಲಕ್ಷ ಮತ್ತು ಪರಿಹಾರದ ಬಾಕಿ 2 ಲಕ್ಷ, ಮೃತನ ಮಗನಿಗೆ ಉದ್ಯೋಗವನ್ನು ಸಹ ನೀಡುವ ಭರವಸೆ ನೀಡಿದ್ದು, ಒಂಟಿ ಸಲಗವನ್ನು ಕಾಡಿನತ್ತ ಓಡಿಸುವ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.