ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ, ಭದ್ರಾ ನದಿಗಳು: ಶಿವಮೊಗ್ಗ - ಭದ್ರಾವತಿಯಲ್ಲಿ ಪ್ರವಾಹ

Update: 2018-08-14 17:42 GMT

ಶಿವಮೊಗ್ಗ, ಆ. 14: ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಯ ಅಬ್ಬರ ಮುಂದುವರೆದಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪ್ರಮುಖ ನದಿಗಳು ಮೈದುಂಬಿ ಹರಿಯಲಾರಂಭಿಸಿದ್ದು, ಪ್ರವಾಹ ಸೃಷ್ಟಿಸಿವೆ. ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. 

ತುಂಗಾ ಹಾಗೂ ಭದ್ರಾ ಡ್ಯಾಂಗಳಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಹಾದು ಹೋಗಿರುವ ತುಂಗಾ ಹಾಗೂ ಭದ್ರಾವತಿಯ ಮೂಲಕ ಹಾದು ಹೋಗಿರುವ ಭದ್ರಾ ನದಿಗಳು ಪ್ರವಾಹ ಸೃಷ್ಟಿಸಿವೆ. ನದಿ ಪಾತ್ರದ ಹಲವು ಬಡಾವಣೆಗಳು ಜಲಾವೃತವಾಗಿವೆ. ಎರಡು ನಗರ ವ್ಯಾಪ್ತಿಯ ನದಿಪಾತ್ರದ ಹಲವು ಮನೆಗಳು ಜಲಾವೃತವಾಗಿವೆ. 

ತೀರ್ಥಹಳ್ಳಿಯ ಹಲವೆಡೆ ತುಂಗಾ ನದಿ ಪ್ರವಾಹ ಸೃಷ್ಟಿಸಿದೆ. ಅಪಾರ ಪ್ರಮಾಣದ ತೋಟ, ಗದ್ದೆಗಳು ಜಲಾವೃತವಾಗಿವೆ. ಪಟ್ಟಣದ ರಾಮೇಶ್ವರ ದೇವಾಲಯವು ನದಿಯಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಬೇಗುವಳ್ಳಿಯಲ್ಲಿ ಕೆರೆಯ ತಡೆಗೋಡೆ ಕುಸಿದಿದೆ.

ಭದ್ರಾವತಿ ವರದಿ: ಭದ್ರಾ ಡ್ಯಾಂನಿಂದ 51002 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಈ ಕಾರಣದಿಂದ ಭದ್ರಾವತಿಯಲ್ಲಿ ಭದ್ರೆ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಇದರಿಂದ ಕವಲುಗುಂಡಿಯಲ್ಲಿ ಸುಮಾರು 20 ಮನೆಗಳು ಜಲಾವೃತವಾಗಿದ್ದು, 60 ಜನರನ್ನು ಸ್ಥಳಾಂತರಿಸಲಾಗಿದೆ. ಅಂಬೇಡ್ಕರ್ ನಗರದಲ್ಲಿ 6 ಮನೆ, ಯಕೀನ್ಷಾ ಕಾಲೋನಿ, ಗುಂಡುರಾವ್‍ ಶೆಡ್, ಸುಣ್ಣದಹಳ್ಳಿ ಸುತ್ತಮುತ್ತಲಿನ ಭದ್ರಾ ನದಿಪಾತ್ರದ ಪ್ರದೇಗಳಿಗೆ ನೀರು ನುಗ್ಗಿದೆ. 

ಭದ್ರಾವತಿ ಪಟ್ಟಣದ ಹೊಸ ಸೇತುವೆ ಭದ್ರಾ ನದಿ ನೀರಿನಲ್ಲಿ ಜಲಾವೃತವಾಗಿದೆ. ಸೇತುವೆಯ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಜಲಾವೃತಕ್ಕೀಡಾದ ಪ್ರದೇಶದ ನಿವಾಸಿಗಳಿಗೆ ಪಟ್ಟಣದ ಮೂರು ಕಡೆ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಒಂದೆರೆಡು ಮನೆಗಳ ಗೋಡೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯಾಡಳಿತ ಮೂಲಗಳು ಮಾಹಿತಿ ನೀಡಿವೆ. 

ಶಿವಮೊಗ್ಗ ವರದಿ: ಗಾಜನೂರಿನ ತುಂಗಾ ಡ್ಯಾಂನಿಂದ 83,855 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿರುವುದರಿಂದ ಶಿವಮೊಗ್ಗದಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ನಗರದ ನದಿಪಾತ್ರದ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. 60 ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 

ಕುಂಬಾರಗುಂಡಿಯಲ್ಲಿ 20 ಮನೆ, ಮಂಡಕ್ಕಿಭಟ್ಟಿಯಲ್ಲಿ 25, ಇಮಾಮ್‍ಬಾಡದಲ್ಲಿ 24 ಹಾಗೂ ಗುಂಡಪ್ಪಶೆಡ್ ಬಡಾವಣೆಯಲ್ಲಿ ಸುಮಾರು 2 ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಈ ಬಡಾವಣೆಯ ನಿವಾಸಿಗಳಿಗೆ ಶಾದಿಮಹಲ್ ಹಾಗೂ ರಾಮಮಂದಿರದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. 

ತೀರ್ಥಹಳ್ಳಿ ವರದಿ: ತೀರ್ಥಹಳ್ಳಿ ಪಟ್ಟಣದಲ್ಲಿಯೂ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಪಟ್ಟಣದ ರಾಮೇಶ್ವರ ದೇವಾಲಯ, ರಾಮಮಂಟಪ ನದಿಯಲ್ಲಿ ಮುಳುಗಡೆಯಾಗಿದೆ. ಮಂಡಗದ್ದೆ ಬಳಿ ತೋಟ, ಮನೆಗಳು ತುಂಗಾ ನದಿಯಲ್ಲಿ ಮುಳುಗಡೆಯಾಗಿವೆ. ಮಂಡಗದ್ದೆಯ ಬೇಗುವಳ್ಳಿ ಬಳಿ ಕೆರೆಯ ತಡೆಗೋಡೆ ಕುಸಿದಿದೆ. 

'ಮುನ್ನೆಚ್ಚರಿಕೆ ಕ್ರಮ' : ಡಿ.ಸಿ. ಕೆ.ಎ.ದಯಾನಂದ್
'ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಲವೆಡೆ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಎಲ್ಲಾ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಕೆಲವು ತಾಲೂಕುಗಳಲ್ಲಿ ಈಗಾಗಲೇ ಶಾಲಾ ಮಕ್ಕಳಿಗೆ ರಜೆ ನೀಡಿದ್ದು, ಪರಿಸ್ಥಿತಿಗನುಸಾರ ಉಳಿದ ಕಡೆಗಳಲ್ಲೂ ರಜೆ ಘೋಷಣೆ ಘೋಷಿಸಲಾಗುವುದು. ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಸಹಾಯಕ್ಕಾಗಿ, ಮಾಹಿತಿಗಾಗಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. 08182-271101/1077/9481492999 ಸಂಖ್ಯೆಗೆ ಕರೆ ಮಾಡುವಂತೆ' ಜಿಲ್ಲಾಧಿಕಾರಿ ಕೆ.ಎ.ದಾಯನಂದ್ ತಿಳಿಸಿದ್ದಾರೆ. 

ಹೈ ಅಲರ್ಟ್ : ಶಿವಮೊಗ್ಗ ಎ.ಸಿ. ಡಾ.ಎಂ.ದಾಸೇಗೌಡ 
'ಶಿವಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿಯ ಹಲವೆಡೆ ಪ್ರವಾಹ ಸ್ಥಿತಿ ಕಂಡುಬಂದಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಈ ಕಾರಣದಿಂದ ಈ ಮೂರು ತಾಲೂಕುಗಳಲ್ಲಿ ವ್ಯಾಪಕ ಕಟ್ಟೆಚ್ಚರವಹಿಸಲಾಗಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಸಂತ್ರಸ್ತರಿಗೆ 5 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಎರಡು ನಗರಗಳಲ್ಲಿ ಜಲಾವೃತಕ್ಕೀಡಾದ ಪ್ರದೇಶಗಳಿಗೆ ತಾವು ಖುದ್ದು ಭೇಟಿಯಿತ್ತು ಪರಿಶೀಲನೆ ನಡೆಸಿದ್ದೇನೆ. ಸ್ಥಳದಲ್ಲಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ಕಂದಾಯ ವಿಭಾಗದ ಅಧಿಕಾರಿ-ಸಿಬ್ಬಂದಿಗಳಿಗೆ ದಿನದ 24 ಗಂಟೆಗಳ ಕಾಲ ಕಾರ್ಯಪ್ರವೃತ್ತವಾಗಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಶಿವಮೊಗ್ಗ ಉಪ ವಿಭಾಗಾಧಿಕಾರಿ ಡಾ.ಎಂ.ದಾಸೇಗೌಡ ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News