×
Ad

ಕೆಆರ್‍ಎಸ್‍ನಿಂದ 1 ಲಕ್ಷ ಕ್ಯೂಸೆಕ್ ನೀರು ನದಿಗೆ: ಕಾವೇರಿಯಲ್ಲಿ ಪ್ರವಾಹ ಭೀತಿ

Update: 2018-08-14 23:32 IST

ಮಂಡ್ಯ, ಆ.14: ಕಾವೇರಿ ಕಣಿವೆಯಲ್ಲಿ ವರುಣನ ಆರ್ಭಟದಿಂದ ಕೃಷ್ಣರಾಜಸಾಗರ ಜಲಾಶಯ(ಕೆಆರ್‍ಎಸ್)ಕ್ಕೆ ಒಳಹರಿವಿನ ಪ್ರಮಾಣ  ಹೆಚ್ಚಾಗಿದ್ದು, ಜಲಾಶಯದ ಹೊರಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್ ಮೀರಿದೆ.

ಮಂಗಳವಾರ ಬೆಳಗ್ಗೆ ಜಲಾಶಯದ 37 ಗೇಟ್‍ಗಳಿಂದ ಒಂದು ಲಕ್ಷ ಕ್ಯೂಸೆಕ್ ನೀರು ಹೊರಬಿಡುಗಡೆ ಮಾಡಿದ್ದು, ಒಂದೂವರೆ ಲಕ್ಷ ಕ್ಯೂಸೆಕ್‍ವರೆಗೂ ಹೆಚ್ಚುವ ಸೂಚನೆಯಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

ಪಕ್ಷಿಧಾಮ ಜಲಾವೃತ: ಜಲಾಶಯದಿಂದ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಿದ ಕಾರಣ ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮ ಜಲಾವೃತವಾಗಿದೆ. ನಡುಗಡ್ಡೆಯಲ್ಲಿರುವ ಮರಗಳ ಮೇಲಿನ ಪಕ್ಷಿಗಳು, ಗೂಡುಗಳು ಕೊಚ್ಚಿಹೋಗುವ ಆತಂಕ ಸೃಷ್ಟಿಯಾಗಿದೆ. ನದಿಯ ನೀರು ದಡಮೀರಿ ಏರುತ್ತಿದ್ದು, ಪಕ್ಷಿಧಾಮದಲ್ಲಿರುವ ಕಚೇರಿ, ಅಂಗಡಿಗಳಿಗೆ ನೀರು ನುಗ್ಗಿದೆ. ಪ್ರವಾಸಿಗರು ಕುಳಿತುಕೊಳ್ಳುವ ಕುರ್ಚಿಗಳು ಜಲಾವೃತಗೊಂಡಿವೆ. ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

ದ್ವೀಪ ಪಟ್ಟಣವಾದ ಶ್ರೀರಂಗಪಟ್ಟಣ ಸುತ್ತಲೂ ಹಲವು ದೇವಾಲಯಗಳಿದ್ದು, ನದಿಯ ನೀರು ಹಲವು ದೇವಾಲಯಗಳ ಅಂಗಳಕ್ಕೆ ನುಗ್ಗಿದೆ. ಜತೆಗೆ ತುಂತುರು ಮಳೆಯಿಂದಾಗಿ ಪ್ರವಾಸಿಗರು ಪರದಾಡುತ್ತಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ:
ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ ಸೂಚಿಸಿದ್ದಾರೆ.

ಹಾಸನದ ಹೇಮಾವತಿ ಜಲಾಶಯದಿಂದಲೂ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಕಾವೇರಿನದಿಯಲ್ಲಿನ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ದವಾಗಿದೆ. ಪ್ರವಾಹ ಪರಿಸ್ಥಿತಿ ಕಾರ್ಯಾಚರಣೆಗಾಗಿ ಎನ್‍ಡಿಆರ್‍ಎಫ್ ಪಡೆಗೆ ಜಿಲ್ಲಾಡಳಿತ ಮನವಿ ಮಾಡಿದೆ. ನದಿಪಾತ್ರದ ಪ್ರವಾಸಿ ತಾಣಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News