ಕೇರಳದಲ್ಲಿ ಈ ಬಾರಿ ಓಣಂ ಆಚರಣೆ ಇಲ್ಲ

Update: 2018-08-15 03:43 GMT

ತಿರುವನಂತಪುರ, ಆ.15: ಶತಮಾನವೇ ಕಂಡು ಕೇಳರಿಯದ ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳದಲ್ಲಿ ಈ ಬಾರಿ ಓಣಂ ಆಚರಣೆಯನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದ್ದಾರೆ.

ಸುಗ್ಗಿ ಹಬ್ಬವಾದ ಓಣಂ ಅನ್ನು ಪ್ರತಿ ವರ್ಷ ರಾಜ್ಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ರಾಜ್ಯಾದ್ಯಂತ ಓಣಂ ಸಾಂಸ್ಕೃತಿಕ ಆಚರಣೆಗಳಿಗಾಗಿ ಕೇರಳ ಸರ್ಕಾರ 30 ಕೋಟಿ ರೂಪಾಯಿಗಳನ್ನು ಮೀಸಲಿರಿಸಿತ್ತು. ಈಗ ಇದನ್ನು ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ.

ಒಂದು ವಾರದ ಈ ಹಬ್ಬ ಆಗಸ್ಟ್‌ನಲ್ಲಿ ಆಚರಿಸಲ್ಪಡುತ್ತದೆ ಹಾಗು ತಿರು ಓಣಂ ಆಗಸ್ಟ್ 25ರಂದು ನಡೆಯಬೇಕಿತ್ತು.

"ನಮ್ಮ ರಾಜ್ಯ ಭೀಕರ ವಿಕೋಪ ಸ್ಥಿತಿಯನ್ನು ಎದುರಿಸುತ್ತಿದ್ದು, 444 ಗ್ರಾಮಗಳು ಹಾನಿಗೀಡಾಗಿವೆ. 39 ಮಂದಿ ಮೃತಪಟ್ಟು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. ಭಾರಿ ಮಳೆಯ ಕಾರಣದಿಂದ 27 ಅಣೆಕಟ್ಟುಗಳ ಬಾಗಿಲುಗಳನ್ನು ತೆರೆದಿರುವುದರಿಂದ ವ್ಯಾಪಕ ಪ್ರಮಾಣದಲ್ಲಿ ಬೆಳೆ ಹಾಗೂ ಆಸ್ತಿಪಾಸ್ತಿ ನಾಶವಾಗಿದೆ. ಇಡುಕ್ಕಿ ಹಾಗೂ ವಯನಾಡ್ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಜತೆಗೆ ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲೂ ಜನಜೀವನ ಅಸ್ತವ್ಯಸ್ತಗೊಂಡಿದೆ" ಎಂದು ಸರ್ಕಾರಿ ಮೂಲಗಳು ಹೇಳಿವೆ.

ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಸಂಪುಟ ಉಪಸಮಿತಿ ರಚಿಸಲಾಗಿದೆ. ಸೆಪ್ಟೆಂಬರ್ 3ರಿಂದ 15ರವರೆಗೆ ವಿಶೇಷ ನ್ಯಾಯಾಲಯಗಳನ್ನು ನಡೆಸಿ, ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡವರಿಗೆ ಉಚಿತವಾಗಿ ದಾಖಲೆಯ ಪ್ರತಿಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ವಿಜಯನ್ ಸ್ಪಷ್ಟಪಡಿಸಿದ್ದಾರೆ.

ರಾಜ್ಯಮಟ್ಟದ ಬ್ಯಾಂಕರ್ ಸಮಿತಿ ಸಭೆ ನಡೆಸಿ, ಪರಿಹಾರಧನವನ್ನು ವರ್ಗಾಯಿಸುವಾಗ ಯಾವುದೇ ಶುಲ್ಕ ವಿಧಿಸದಂತೆಯೂ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News