ಮಹಾದಾಯಿ ನ್ಯಾಯಾಧೀಕರಣ ತೀರ್ಪಿನಿಂದ ಪೂರ್ಣ ಸಮಾಧಾನವಾಗಿಲ್ಲ: ಸಿದ್ದರಾಮಯ್ಯ

Update: 2018-08-15 14:21 GMT

ಬೆಂಗಳೂರು, ಆ.15: ಮಹಾದಾಯಿ ನ್ಯಾಯಾಧೀಕರಣವು ನೀಡಿರುವ ತೀರ್ಪಿನಿಂದ ನಮಗೆ ಭಾಗಶಃ ಸಮಾಧಾನವಾಗಿದೆ. ಆದರೆ, ಪೂರ್ಣ ಸಮಾಧಾನವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 36.5 ಟಿಎಂಸಿ ನೀರು ನೀಡುವಂತೆ ನ್ಯಾಯಾಧೀಕರಣಕ್ಕೆ ಕೇಳಿದ್ದೆವು. ಆದರೆ, 13.5 ಟಿಎಂಸಿ ನೀರು ಮಾತ್ರ ಕೊಟ್ಟಿದ್ದಾರೆ ಎಂದರು.

ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು ಸಿಗಲಿದೆ. ಉಳಿದ ನೀರು ವಿದ್ಯುತ್ ಉತ್ಪಾದನೆಗೆ ಲಭಿಸಲಿದೆ. ಆ ನೀರು ಸಹ ವಿದ್ಯುತ್ ಉತ್ಪಾದನೆ ಬಳಿಕ ಗೋವಾಗೆ ಹೋಗಲಿದೆ. ಅದರ ಉಪಯೋಗ ನಮಗೆ ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮಹಾದಾಯಿ ವಿಚಾರದಲ್ಲಿ ಐದು ವರ್ಷಗಳ ಕಾಲ ನಮ್ಮ ಸರಕಾರ ಕಾನೂನು ಹೋರಾಟ ಮಾಡಿತ್ತು. ನಮ್ಮ ವಕೀಲರು ನ್ಯಾಯಾಧೀಕರಣದ ಎದುರು ಸಮರ್ಥವಾಗಿ ವಾದ ಮಂಡಿಸಿದ್ದರು. ಇದರಿಂದಾಗಿ, ನಮಗೆ ಅಲ್ಪ ಸಮಾಧಾನ ಸಿಕ್ಕಿದೆ ಎಂದು ಅವರು ತಿಳಿಸಿದರು.

ರಾಜ್ಯದ ಜನರಿಗೆ 72ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಾವು ಬಹಳ ದೂರ ಸಾಗಿ ಬಂದಿದ್ದೇವೆ. ಸಂವಿಧಾನದ ಆಶಯಗಳು ಇನ್ನೂ ಪರಿಪೂರ್ಣವಾಗಿ ಈಡೇರಿಲ್ಲ. ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಎಲ್ಲ ಮಹನೀಯರನ್ನ ನೆನಪಿಸಿಕೊಳ್ಳಬೇಕಿದೆ. ಸ್ವಾತಂತ್ರ್ಯ ಎಲ್ಲರಿಗೂ ಸಿಗುವಂತಾಗಬೇಕು. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿವೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದೆಲ್ಲವೂ ಮುಗಿದ ಮೇಲೆ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದ ಸಿದ್ದರಾಮಯ್ಯ, ಸದ್ಯಕ್ಕೆ ನಾನು ಹೊಸದಿಲ್ಲಿಗೆ ಹೋಗುತ್ತಿಲ್ಲ. ಎಐಸಿಸಿ ಅಧ್ಯಕ್ಷರು ಕರೆದಾಗ ಹೋಗುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News