ದೇಶ ಸೇವೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ: ಏರ್ ಕಮಾಂಡರ್ ಆರ್.ರವಿಶಂಕರ್

Update: 2018-08-15 14:23 GMT

ಬೆಳಗಾವಿ, ಆ.15: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದೇಶ ಹಾಗೂ ಭದ್ರತಾ ಪಡೆಗಳು ಅಭಿವೃದ್ದಿಗೊಳ್ಳುತ್ತ ದೇಶ ಸೇವೆಯಲ್ಲಿ ನಿರತವಾಗಿವೆ. ಅದರಂತೆ ನಮ್ಮ ಸಾಮರ್ಥ್ಯ ಮತ್ತು ಜವಾಬ್ದಾರಿಗಳನ್ನು ಗಂಭೀರವಾಗಿ ಪರಿಗಣಿಸಿ ನಿಭಾಯಿಸಬೇಕಾಗಿದೆ ಎಂದು ಏರ್ ಕಮಾಂಡರ್ ಆರ್.ರವಿಶಂಕರ್ ಹೇಳಿದರು.

ಬುಧವಾರ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 72ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಇಂದೇ ಕಾರ್ಯಪ್ರವೃತ್ತಗೊಳ್ಳಬೇಕಾಗಿದೆ ಎಂದರು.

ಬಲಿಷ್ಠ ಭಾರತ ನಿರ್ಮಾಣವೆಂದರೆ ಸ್ವಾರ್ಥವನ್ನು ಬಿಟ್ಟು ಸೇವೆ ಮಾಡಬೇಕು. ತಮ್ಮ ಕೈಲಾಗುವ ಸೇವೆಯ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದ ಅವರು, ಬೆಳಗಾವಿ ನಗರ ಮತ್ತು ಜಿಲ್ಲೆ ಸ್ವಾತಂತ್ರ ಹೋರಾಟದಲ್ಲಿ ಹೇಗೆ ಬಲಿದಾನ ನೀಡಿದೆಯೇ ಅದೇ ರೀತಿ ಈಗಲೂ ದೇಶ ಸೇವೆಯಲ್ಲಿ ಸದಾ ಮುಂದಿದೆ ಎಂದರು.

ಹಲವು ಮಿಲಿಟರಿ ಪಡೆಗಳಿಗೆ ಆಶ್ರಯ ತಾಣವಾಗಿ, ತರಬೇತಿ ನೀಡುತ್ತ ಸೈನಿಕರನ್ನು ದೇಶಸೇವೆಗೆ ಸನ್ನದ್ಧಗೊಳಿಸುವ ಕಾರ್ಯದಲ್ಲಿ ಬೆಳಗಾವಿ ನಿರತವಾಗಿದೆ. ಇದು ಹೆಮ್ಮೆಯ ಸಂಗತಿ ಎಂದು ಆರ್.ರವಿಶಂಕರ್ ಹೇಳಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಮಾತನಾಡಿ, ವೈದ್ಯ ವಿಜ್ಞಾನದಲ್ಲಾಗುತ್ತಿರುವ ಬದಲಾವಣೆಗೆ ತಕ್ಕಂತೆ ಆಸ್ಪತ್ರೆಯು ಪರಿಣಾಮಕಾರಿಯಾದ ಚಿಕಿತ್ಸೆ ನೀಡುವಲ್ಲಿ ನಿರತವಾಗಿದೆ. ಕೇಂದ್ರ ಸರಕಾರವು ದೇಶದ ನಾಗರಿಕರಿಗೆ ಆಯುಷ್ಯಮಾನ ಭಾರತ ಎಂಬ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಇದು ದೇಶವಾಸಿಗಳ ಆರೋಗ್ಯ ಕಾಪಾಡಲು ಅನುಕೂಲವಾಗಲಿದೆ ಎಂದರು.

ಆಸ್ಪತ್ರೆಯು ಹೊರತರುವ ವಿಶೇಷ ಸಂಚಿಕೆ ಲೈಪ್‌ಲೈನ್ ಪುಸ್ತಕವನ್ನು ಆರ್. ರವಿಶಂಕರ್, ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ವಿವೇಕ ಸಾವೋಜಿ ಮಧುಮೇಹ ವೈದ್ಯ, ಕುಲಸಚಿವ ಡಾ.ಡಿ.ಪಾಟೀಲ ಫೋಕಸ್ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ಆರ್.ಬಿ.ನೇರ್ಲಿ, ಡಾ.ಆರ್.ಎಸ್. ಮುಧೋಳ, ಡಾ.ಸಂತೋಷ ಕುರಬೆಟ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News