×
Ad

ಕಳವಾದ ಕಾರು ಅಪಘಾತವಾದರೆ ಮಾಲಕ ಹೊಣೆಗಾರನಲ್ಲ: ಹೈಕೋರ್ಟ್

Update: 2018-08-15 21:43 IST

ಬೆಂಗಳೂರು, ಆ.15: ಕಳ್ಳ ಕಾರು ಕದ್ದು ಪರಾರಿಯಾಗುತ್ತಿದ್ದಾಗ ಅಪಘಾತ ಸಂಭವಿಸಿದ್ದರ ಪರಿಣಾಮ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಕಾರು ಮಾಲಕನನ್ನು ಹೈಕೋರ್ಟ್ ಪಾರು ಮಾಡಿದೆ. ಕಾರು ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ಮಾಲಕನೆ ಪರಿಹಾರ ನೀಡಬೇಕೆಂದು ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ ನೀಡಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಪರಿಹಾರ ನೀಡುವ ಹೊಣೆಯನ್ನು ವಿಮಾ ಕಂಪನಿಗೆ ವರ್ಗಾಯಿಸಿದೆ.

ಕಾರು ಕದ್ದ ವ್ಯಕ್ತಿ ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಮೇಲಾಗಿ ಆತನ ಬಳಿ ಅಧಿಕೃತ ಚಾಲನಾ ಪರವಾನಗಿಯೂ ಇರಲಿಲ್ಲ. ಹೀಗಾಗಿ ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ವಿಮಾ ಕಂಪೆನಿಯ ವಾದ ತಳ್ಳಿ ಹಾಕಿರುವ ಹೈಕೋರ್ಟ್, ಮೃತನ ಕುಟುಂಬಕ್ಕೆ ಪರಿಹಾರದ ಸಂಪೂರ್ಣ ಮೊತ್ತವನ್ನು ಬಡ್ಡಿ ಸಹಿತ ಪಾವತಿಸುವಂತೆ ವಿಮಾ ಕಂಪೆನಿಗೆ ನಿರ್ದೇಶಿಸಿದೆ.

ಪ್ರಕರಣವೇನು: ಮಂಗಳೂರಿನ ವ್ಯಕ್ತಿಗೆ ಸೇರಿದ್ದ ಸ್ಯಾಂಟ್ರೊ ಕಾರ್ 2005ರ ಎ.11ರಂದು ಕಳುವಾಗಿತ್ತು. ಕದ್ದ ಕಾರನ್ನು ಕಳ್ಳ ವೇಗವಾಗಿ ಚಲಾಯಿಸಿ ಪಾದಚಾರಿಗೆ ಢಿಕ್ಕಿ ಹೊಡೆಸಿದ್ದ. ತೀವ್ರವಾಗಿ ಗಾಯಗೊಂಡ ಪಾದಚಾರಿ ಸ್ಥಳದಲ್ಲೆ ಸಾವಿಗೀಡಾಗಿದ್ದ. ಬಳಿಕ ಕಳ್ಳನನ್ನು ಪೊಲೀಸರು ಬಂಧಿಸಿದ್ದರು. ಈ ಮಧ್ಯೆ ಮೃತನ ಕುಟುಂಬದವರು ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು. ಅಪಘಾತ ನಡೆಸಿದ ಕಳ್ಳನ ಬಳಿ ಚಾಲನಾ ಪರವಾನಗಿ ಇಲ್ಲದ್ದರಿಂದ, ನಿಯಮಗಳ ಪ್ರಕಾರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಿಮಾ ಕಂಪೆನಿ ಪ್ರತಿಪಾದಿಸಿತ್ತು. ಹೀಗಾಗಿ ಕಾರು ಚಾಲಕ ಹಾಗೂ ಮಾಲಕ ಒಟ್ಟಾಗಿ 7,49,000 ರೂ. ಪರಿಹಾರವನ್ನು ಮೃತರ ಕುಟುಂಬಕ್ಕೆ ಪಾವತಿಸಬೇಕು ಎಂದು 2010ರ ಫೆ. 15ರಂದು ನ್ಯಾಯಾಧಿಕರಣ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕಾರ್ ಮಾಲಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಾರ್ ಮಾಲಕರ ವಾದ: ಮಾಲಕರು ಕಾರಿಗೆ ವಿಮೆ ಮಾಡಿಸಿದ್ದರು. ಆದರೆ, ಕಾರ್ ಕದ್ದು ಪರಾರಿಯಾಗುತ್ತಿದ್ದವ ಅಪಘಾತ ನಡೆಸಿದ್ದಾನೆ. ಇದರಲ್ಲಿ ಮಾಲಕರದ್ದೇನೂ ತಪ್ಪಿಲ್ಲ. ಇಂಥ ಸಂದರ್ಭಗಳಲ್ಲಿ ವಿಮಾ ಸಂಸ್ಥೆಗಳೇ ಪರಿಹಾರ ಒದಗಿಸಬೇಕೆಂದು ಸುಪ್ರೀಂಕೋರ್ಟ್ ಸಹ ತೀರ್ಪು ನೀಡಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಇನ್ಶೂರೆನ್ಸ್ ಮಾಡಿಸುವುದು ಸಂಸ್ಥೆಯ ವ್ಯವಹಾರ. ಎಲ್ಲ ವ್ಯವಹಾರಗಳಲ್ಲೂ ಅದರದ್ದೆ ಆದ ರಿಸ್ಕ್‌ಗಳಿರುತ್ತವೆ. ಲಾಭ ಗಳಿಸಲು ಸಿದ್ಧ ಇರುವವರು ರಿಸ್ಕ್‌ಗಳನ್ನೆದುರಿಸಲೂ ಸಿದ್ಧರಿರಬೇಕು. ಹೀಗಾಗಿ ಕಾರು ಕಳ್ಳತನದಂಥ ಪ್ರಕರಣಗಳಲ್ಲಿ ವಿಮೆಯ ಹಣ ಪಾವತಿಸುವುದು ಸಂಸ್ಥೆಯ ಜವಾಬ್ದಾರಿ ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ.

ಸಾಕ್ಷಿಯಾಗಿ ಪರಿಗಣಿಸಿ: ಕಳ್ಳನಿಗೆ ಶಿಕ್ಷೆ ವಿಧಿಸಿದ್ದ ಸೆಷನ್ಸ್ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದ ಕೆಲ ಅಂಶಗಳನ್ನು ಪರಿಗಣಿಸಲು ನಿರಾಕರಿಸಿರುವ ನ್ಯಾಯಾಧಿಕರಣದ ಕ್ರಮ ಸರಿಯಲ್ಲ ಎಂದಿರುವ ಹೈಕೋರ್ಟ್, ಶಿಕ್ಷೆ ವಿಧಿಸಿ ಕ್ರಿಮಿನಲ್ ಕೋರ್ಟ್ ನೀಡಿರುವ ಆದೇಶವನ್ನು ಭಾರತಿಯ ಸಾಕ್ಷ್ಯಾಧಾರ ಕಾಯ್ದೆ ಅನುಸಾರ ಸಾಕ್ಷಿಯನ್ನಾಗಿ ಪರಿಗಣಿಸಬೇಕಿತ್ತು ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ವಿಮೆಯ ಉದ್ದೇಶವೇ ಪರಿಹಾರ ನೀಡುವುದು: ಅಪಘಾತಗಳಲ್ಲಿ ಗಾಯಗೊಳ್ಳುವ ವ್ಯಕ್ತಿಗೆ ಅಥವಾ ಸಾವಿಗೀಡಾಗುವ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸುವುದೇ ಕಡ್ಡಾಯ ವಿಮೆಯ ಮೂಲ ಉದ್ದೇಶ. ವಿಮೆ ಮಾಡಿಸಿರುವ ಕಾರು ಕಳುವಾಗಿ ಅಪಘಾತ ಸಂಭವಿಸಿದರೆ ಅದರ ಮಾಲಕ ಸಂಕಷ್ಟ ಎದುರಿಸುವಂತಾಗುತ್ತದೆ. ಪ್ರಕರಣದಲ್ಲಿ ಆತ ನಿಜವಾಗಿಯೂ ಅಮಾಯಕನಾಗಿರುತ್ತಾನೆ. ಇಂಥ ಸಂದರ್ಭಗಳಲ್ಲಿ ವಿಮಾ ಕಂಪನಿಗಳೇ ಪರಿಹಾರ ನೀಡಬೇಕಿದೆ ಎಂದು ಪ್ರರಕಣವೊಂದರಲ್ಲಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News