ಸಂವಿಧಾನವೇ ಈ ದೇಶದ ಧರ್ಮ: ಸಚಿವ ಡಿ.ಸಿ.ತಮ್ಮಣ್ಣ

Update: 2018-08-15 16:46 GMT

ಶಿವಮೊಗ್ಗ, ಆ. 15: ಪ್ರತಿಯೋರ್ವರ ಬದುಕು ಹಸನಾಗಬೇಕು. ಎಲ್ಲರೂ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು. ಇದಕ್ಕೆ ಸಂವಿಧಾನ ಸಹಾಯಕವಾಗುತ್ತದೆ. ಸಂವಿಧಾನವೇ ಈ ದೇಶದ ಧರ್ಮವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ. 

ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 72 ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಅವರು ತಮ್ಮ ಸಂದೇಶ ನೀಡಿದರು. ನೂರಾರು ನಿರಾಶೆ, ಆತಂಕಗಳ ನಡುವೆಯೂ ಶೋಷಿತ ಜನರು ಪ್ರತಿಭಟನೆಯ ಧ್ವನಿಯೊಂದಿಗೆ ಮತ್ತೆ ಮತ್ತೆ ಜೀವನೋತ್ಸಾಹ ತಂದುಕೊಂಡೇ ಬದುಕುತ್ತಿದ್ದಾರೆ. ಇವರೆಲ್ಲರೂ ಈ ದೇಶದ ನಿಜವಾದ ಕನಸುಗಾರರು. ಬದುಕಿನ ಪ್ರೀತಿ ಅಚ್ಚರಿಯಾಗುವುದೇ ಇಲ್ಲಿ ಎಂದು ಅಭಿಪ್ರಾಯಪಟ್ಟರು. 

ಈ ನೆಲ ನಮ್ಮ ಮುಂದಿನ ಪ್ರತಿಕ್ಷಣದ ಅನಿವಾರ್ಯತೆ ಮತ್ತು ಅಸ್ತಿತ್ವವಾಗುತ್ತದೆ. ತನ್ನ ಕೊನೆಯ ಉಸಿರು ಇರುವವರೆಗೂ ಬದುಕಬೇಕಾಗುವ ಈ ದೇಶವನ್ನು ಪ್ರೀತಿಸಬೇಕು ಎನ್ನುವುದು ಕೇವಲ ಸುಭಾಷಿತ ಮಾತಾಗಬಾರದು. ದೇಶ ಪ್ರೀತಿಸುವುದೆಂದರೆ ಅದೊಂದು ಶಬ್ದ ರೋಮಾಂಚನವಲ್ಲ. 70 ದಶಕಗಳನ್ನು ಈಗಾಗಲೇ ದಾಟಿ ಬಂದಿದ್ದೇವೆ. ಬಡ ಭಾರತ ಇಂದು ಅಭಿವೃದ್ದಿಶೀಲವಾಗಿದೆ. ಶಸಕ್ತ ರಾಷ್ಟ್ರಗಳ ಸಾಲಿನಲ್ಲಿ ನಾವಿದ್ದೇವೆ ಎಂದರು.

ದೇಶ ಸಶಕ್ತವಾಗುತ್ತಿದೆ ಎಂದರೆ, ಎಲ್ಲವನ್ನು ಸಾಧಿಸಿದ್ದೆವೆ ಎಂದಲ್ಲ. ಅಭಿವೃದ್ದಿಯ ಜೊತೆಗೆ ಸಮಸ್ಯೆಗಳು ನಮ್ಮೊಂದಿಗಿವೆ. ಕ್ರಮಿಸುವ ದಾರಿ ದೂರವಿದೆ. ತೊಡಕುಗಳಿವೆ. ಜಾತಿ-ದಾರಿದ್ರ್ಯಗಳಿವೆ. ಸಮಸಮಾಜ ಕಟ್ಟುವ ಆಶಯವಿದೆ, ಇದು ಕೇವಲ ಭೌತಿಕವಷ್ಟೇ ಅಲ್ಲ, ಬೌದ್ದಿಕವಾಗಬೇಕು ಎಂದು ಹೇಳಿದರು. 
ಮುಖ್ಯವಾಗಿ ಈ ನೆಲದ ನೇಗಿಲ ಯೋಗಿ ಸಂಕಟವಿಲ್ಲದೇ ಬದುಕಬೇಕು. ಆತ್ಮಹತ್ಯೆಯಂತಹ ಮಹಾದುರಂತಕ್ಕೆ ಮುಂದಾಗುವ ಆಲೋಚನೆಗಳನ್ನು ಕೈಬಿಡಬೇಕು. ಆತನ ಬದುಕು ಹಸನಾಗಬೇಕು. ಶ್ರೀಸಾಮಾನ್ಯನೇ ಈ ದೇಶದ ನಿಜವಾದ ಆಸ್ತಿ. ಅವರೆಲ್ಲರ ಬದುಕು ಸಮಾನತೆಯತ್ತ ಸಾಗಿ ಈ ದೇಶದ ಸಂಸ್ಕೃತಿ, ಜಾತಿ, ಧರ್ಮ, ದಾರಿದ್ರ್ಯಗಳಿಂದ ದೂರವಾಗಿ ಭವ್ಯ ಭಾರತ ನಿರ್ಮಾಣವಾಗಬೇಕಾಗಿದೆ ಎಂದು ಕರೆ ನೀಡಿದರು.

ನಮ್ಮ ನಾಡಿನ ಸರ್ವತೋಮುಖ ಬೆಳವಣಿಗೆಯಾಗಬೇಕಾಗಿದೆ. ಕಲ್ಯಾಣ ರಾಜ್ಯದತ್ತ ನಾವು ಸಾಗಬೇಕು. ಹೀಗಾಗಿಯೇ ಮುಖ್ಯಮಂತ್ರಿಗಳು ಈಗಾಗಲೇ ರೈತರ ಸಾಲ ಮನ್ನಾ ಮಾಡಿದ್ದಾರೆ. ನಾಡಿನ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಇವು ಮುಂದುವರೆಯುತ್ತವೆ ಎಂದರು.

ಭವ್ಯ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗೋಣ. ಸರ್ವಜನಾಂಗದ ಶಾಂತಿಯ ತೋಟಕ್ಕಾಗಿ ಜನಗಣಮನ ಹಾಡೋಣ. ಮನುಷ್ಯರು ಭಾರತದ ಪ್ರಜೆಗಳು ಎನ್ನಿಸುವ ನಿಜವಾದ ಅರ್ಥಕ್ಕೆ ಮುಖಾಮುಖಿಯಾಗೋಣ. ಹೆಮ್ಮೆಯಿಂದ ತಲೆಎತ್ತಿ ನಿಲ್ಲೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಎಂಎಲ್‍ಸಿ ಆಯನೂರು ಮಂಜುನಾಥ್ ಸೇರಿದಂತೆ ಮೊದಲಾದವರಿದ್ದರು. 

ಆಕರ್ಷಕ ಪಥಸಂಚಲನ: ಕೆಎಸ್‍ಆರ್‍ಪಿ, ಸ್ಕೌಟ್ಸ್ ಅಂಡ್ ಗೈಡ್ಸ್, ಪೊಲೀಸ್ ಬ್ಯಾಂಡ್, ದುರ್ಗಿಗುಡಿ ಶಾಲೆ ಮಕ್ಕಳು, ಬಾಲಮಂದಿರದ ಮಕ್ಕಳು ಮತ್ತು ನಗರದ ಶಾಲೆಗಳ ಮಕ್ಕಳು ನಡೆಸಿದ ಪಥ ಸಂಚಲನ ಆಕರ್ಷಕವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ವಿವಿಧ ಶಾಲೆಯ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನಡೆಸಿಕೊಟ್ಟ ನೃತ್ಯ ಪ್ರದರ್ಶನ ನೆರೆದಿದ್ದ ನಾಗರಿಕರ ಮನಸೂರೆಗೊಂಡಿತು. 

ಜಿಲ್ಲೆಯ ಅಭಿವೃದ್ದಿಗೆ ಬದ್ದ 
'ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ತಾನು ಬದ್ಧ. ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳಲಾಗುವುದು. ವರದಿ ಬಂದ ನಂತರ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಮಳೆಯಿಂದ ಹಾನಿಯಾದ ರಸ್ತೆಗಳ ದುರಸ್ತಿಗೂ ಒತ್ತು ನೀಡಲಾಗುವುದು. ಒಟ್ಟಾರೆ ಇಡೀ ಜಿಲ್ಲೆಯಲ್ಲಿ ಆಗಬೇಕಾಗಿರುವ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News