ಸ್ವಾತಂತ್ರ್ಯ ಸಂಗ್ರಾಮದ ಸ್ಮರಣೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಲು ಕಟಿಬದ್ಧರಾಗೋಣ: ಸಚಿವ ಶ್ರೀನಿವಾಸ

Update: 2018-08-15 17:08 GMT

ದಾವಣಗೆರೆ,ಆ.15: ಸ್ವಾತಂತ್ರ್ಯ ಸಂಗ್ರಾಮದ ಸ್ಮರಣೆಯೊಂದಿಗೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸಲು ಕಟಿಬದ್ಧರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ  72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರೀಯ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿ ಪರಿಣಾಮಕಾರಿ ಸುಧಾರಣೆ ತಂದು ಅವುಗಳ ಉದ್ದೇಶ ಈಡೇರಿಸಿ ನಮ್ಮ ಸಮಾಜ, ರಾಷ್ಟ್ರ ಬಲಪಡಿಸೋಣ. ನಾವೆಲ್ಲ ನಮ್ಮ ನಮ್ಮ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿ, ದೇಶಪ್ರೇಮದ ದ್ಯೋತಕವಾಗಿ ಸೌಹಾರ್ದತೆಯಿಂದ ಬಾಳೋಣ ಎಂದು ಆಶಿಸಿದರು.

ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಪ್ರಥಮ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ ರಾಷ್ಟ್ರವನ್ನುದ್ದೇಶಿಸಿ ಆಡಿದ ‘ಟ್ರಸ್ಟ್ ವಿತ್ ಡೆಸ್ಟಿನಿ’ ಭಾಷಣದಲ್ಲಿ ಅವರು ಹೇಳಿದ ಮಾತುಗಳು ಇಂದಿಗೂ ನಮ್ಮನ್ನು ನಾವು ಬ್ರಿಟಿಷರ ಸಂಕೋಲೆಯಿಂದ ಬಿಡಿಸಿಕೊಂಡ ಬಗ್ಗೆ ಎಚ್ಚರಿಸುತ್ತದೆ ಎಂದರು.

ಭಾರತ ಸ್ವಾತಂತ್ರ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದು ಗಾಂಧೀಜಿ ಅಹಿಂಸೆ, ಅಸಹಕಾರ ಮತ್ತು ಸತ್ಯಾಗ್ರಹಗಳ ಮಾರ್ಗ. ಗಾಂಧೀಜಿ ನೇತೃತ್ವದಲ್ಲಿ ಭಾರತ ಬಿಟ್ಟು ತೊಲಗಿ ಎನ್ನುವ ಚಳವಳಿ 1942 ಆ. 9ರಂದು ಪ್ರಾರಂಭವಾಯಿತು. ಈ ಚಳವಳಿಯಲ್ಲಿ ವಿದ್ಯಾರ್ಥಿ ಯುವಕರ ಪಾತ್ರ ಮಹತ್ವವಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬಹಿಷ್ಕಾರ ಹಾಕಿದರು. ಲಾಟಿ ಏಟು, ಗೋಲಿಬಾರು ಎದುರಿಸಿದರು. ಆಗಿನ ಕಾಲದಲ್ಲಿ ನಿಸ್ವಾರ್ಥ ಸೇವೆ, ರಾಷ್ಟ್ರೀಯ ದೇಶಪ್ರೇಮಕ್ಕೆ ಸರಳ ಜೀವನ, ಸ್ವಾಭಿಮಾನಕ್ಕೆ ಹೆಚ್ಚಿನ ಆದ್ಯತೆ ಇತ್ತು. ಈ ಎಲ್ಲ ಗುಣಗಳಿಂದ ಕೂಡಿದ್ದ ಗಾಂಧೀಜಿ, ನೆಹರು, ಪಟೇಲ್, ಬೋಸ್ ಮುಂತಾದ ಆದರ್ಶ ನಾಯಕರ ಮಾರ್ಗದರ್ಶನವಿದ್ದಿತು.

ಅನೇಕ ಮಾಧ್ಯಮಗಳು ಇಡೀ ದೇಶದಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೊಡುಗೆ ನೀಡಿವೆ. ರಾಜ್ಯದಲ್ಲಿಯೂ ಎಸ್.ವಿ ಕಾಮತ್ ಅವರ ಸ್ವದೇಶಿ ಭೀಮನಿ, ಎ.ಬಿ.ಶೆಟ್ಟರ್ ಅವರ ನವಯುಗ, ಕ್ರಾಂತಿವೀರ, ರಾಷ್ಟ್ರಬಂಧು, ಪ್ರಭಾತ್ ಹೀಗೆ ಅನೇಕ ಪತ್ರಿಕೆಗಳು ರಾಜ್ಯದಲ್ಲಿ ಹೋರಾಟದ ಕಿಚ್ಚನ್ನು ಮೂಡಿಸಿದ್ದು ಬ್ರಿಟಿಷರು ಭಾರತ ಬಿಟ್ಟು ತೊಲಗುವಲ್ಲಿ ಮಾಧ್ಯಮಗಳ ಪಾತ್ರ ಸಹ ದೊಡ್ಡದಿದೆ ಎಂದರು.

ಸಂಸದರಾದ ಜಿ.ಎಂ.ಸಿದ್ದೇಶ್ವರ, ವಿಪ ಸದಸ್ಯ ಅಬ್ದುಲ್ ಜಬ್ಬಾರ್, ಜಿಪಂ ಅಧ್ಯಕ್ಷೆ ಜಯಶೀಲ, ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಜಿಪಂ ಸದಸ್ಯ ಬಸವಂತಪ್ಪ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಎಸ್ಪಿ ಆರ್. ಚೇತನ್, ಜಿಪಂ ಸಿಇಓ ಎಸ್. ಅಶ್ವತಿ, ದಾವಣಗೆರೆ ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ತಹಶೀಲ್ದಾರ್ ಎಸ್. ಸಂತೋಷ್ ಹಾಜರಿದ್ದರು.

ಶಿಸ್ತಿನ ಪಥ ಸಂಚಲನ:
ಆಕರ್ಷಕ ಮತ್ತು ಶಿಸ್ತಿನ ಪಥ ಸಂಚಲನ ಪ್ರದರ್ಶಿಸಿದ ದಳಗಳು ಮತ್ತು ಶಾಲೆಗಳಿಗೆ ಪ್ರಶಸ್ತಿ ಘೋಷಿಸಲಾಯಿತು. ಸಮಸ್ತ ದಳದಲ್ಲಿ ಅಗ್ನಿಶಾಮಕ ದಳ ಪ್ರಥಮ, ಅರಣ್ಯ ರಕ್ಷಕ ದಳ ದ್ವಿತೀಯ ಮತ್ತು ಗೃಹ ರಕ್ಷಕ ದಳಕ್ಕೆ ತೃತೀಯ ಬಹುಮಾನ ಘೋಷಿಸಲಾಯಿತು. ಎಸ್‍ಸಿಸಿ ವಿಭಾಗದಲ್ಲಿ ಎ.ಆರ್.ಜಿ ಕಾಲೇಜು ಪ್ರಥಮ, ಡಿಆರ್‍ಎಂ ಸೈನ್ಸ್ ಕಾಲೇಜು ದ್ವಿತೀಯ ಮತ್ತು ಸೇಂಟ್ ಪಾಲ್ಸ್ ಪ್ರೌಢಶಾಲೆ ತೃತೀಯ ಸ್ಥಾನ ಪಡೆಯಿತು. ಶಾಲಾ ತಂಡಗಳಲ್ಲಿ ಎಸ್‍ಟಿಜೆ ಹೈಸ್ಕೂಲ್ ಸ್ಪೆಷಲ್ ಟ್ರೂಪ್ ಪ್ರಥಮ, ಪುಷ್ಪ ಮಹಾಲಿಂಗಪ್ಪ ಪ್ರೌಢಶಾಲೆ ದ್ವಿತೀಯ, ಮೌನೇಶ್ವರ ಶಾಲೆ ತೃತೀಯ ಬಹುಮಾನ ಪಡೆಯಿತು. 

ಸ್ವಾತಂತ್ರ್ಯ ಸಂಗ್ರಾಮದ ಅವಧಿಯ ತ್ಯಾಗ, ಬಲಿದಾನ ಸೇರಿದಂತೆ ದೇಶಭಕ್ತಿ ಸಾರುವ ನೃತ್ಯ ರೂಪಕಗಳನ್ನು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಸಿದ್ದಗಂಗಾ ವಿದ್ಯಾಸಂಸ್ಥೆಯ 500 ಮಕ್ಕಳು, ಪುಷ್ಪ ಮಹಾಲಿಂಗಪ್ಪ ಪ್ರೌಢಶಾಲೆಯ 400 ಮಕ್ಕಳು, ಸೇಂಟ್ ಪಾಲ್ಸ್ ಪ್ರೌಢಶಾಲೆಯ 400 ವಿದ್ಯಾರ್ಥಿಗಳು ಹಾಗೂ ಜೈನ್ ವಿದ್ಯಾಲಯದ 400 ಮಕ್ಕಳು ರಾಷ್ಟ್ರೀಯ ಭಾವೈಕ್ಯತೆ ಬಿಂಬಿಸುವ ನೃತ್ಯ ರೂಪಕ ಪ್ರದರ್ಶಿಸಿ, ಬಹುಮಾನ ಪಡೆದುಕೊಂಡರು.

ಈ ಸಂದರ್ಭ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ತಿಳುವಳ್ಳಿ ಶೆಟ್ಟರ ಸಿದ್ದರಾಮಪ್ಪ, ನ್ಯಾಮತಿ ಕಲ್ಯಾಣಪ್ಪ, ಬಾಳೆಹೊನ್ನೂರು ಮರುಳಸಿದ್ದಪ್ಪ, ಬಿ ಹಾಲಪ್ಪ, ಬಿ.ಎಂ.ಶಿವಲಿಂಗಸ್ವಾಮಿ, ನೀಲಪ್ಪ ಬಿಸಲೇರಿ, ಚನ್ನಬಸಪ್ಪ ಬಿಸಲೇರಿ ಇವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಮನೆ ಮನೆ ಅಂಗಳದಲ್ಲಿ, ಕಚೇರಿ ಆವರಣ ಸೇರಿದಂತೆ ಹಸಿರು ಕರ್ನಾಟಕವನ್ನಾಗಿಸುವ ‘ಹಸಿರು ಕರ್ನಾಟಕ’ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಜೆಜೆಎಂಸಿ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. 

1500 ಅಡಿ ಉದ್ದ, 9 ಅಡಿ ಅಗಲ ರಾಷ್ಟ್ರಧ್ವಜ
ವಾಸವಿ ಯುವಜನ ಸಂಘದ ವತಿಯಿಂದ ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ವಿನೂತನವಾಗಿ 1500 ಅಡಿ ಉದ್ದದ ಮತ್ತು 9 ಅಡಿ ಅಗಲದ ರಾಷ್ಟ್ರಧ್ವಜ ತಯಾರಿಸಿದ್ದು, ಪ್ರೌಢಶಾಲೆ ಮಕ್ಕಳು, ಶಿಕ್ಷಕರು ಮತ್ತು ಸಂಘದ ಸ್ವಯಂ ಸೇವಕರು ಪಾಲ್ಗೊಂಡಿದ್ದ ರಾಷ್ಟ್ರ ಧ್ವಜ ರ್ಯಾಲಿಗೆ ಚಾಲನೆ ನೀಡಲಾಯಿತು. ರಾಷ್ಟ್ರಧ್ವಜ ರ್ಯಾಲಿಯು ನಗರದ ಮುಖ್ಯ ವೃತ್ತಗಳಲ್ಲಿ ಸಾಗಿ ಹೈಸ್ಕೂಲು ಮೈದಾನ ತಲುಪಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News