ಚಿಕ್ಕಮಗಳೂರು: ಅಯ್ಯನಕೆರೆಗೆ ಎಮ್ಮೆಲ್ಸಿ ಧರ್ಮೇಗೌಡರಿಂದ ಬಾಗಿನ ಅರ್ಪಣೆ

Update: 2018-08-15 17:15 GMT

ಚಿಕ್ಕಮಗಳೂರು, ಆ.15: ಕಡೂರು ತಾಲೂಕಿನ ಐತಿಹಾಸಿಕ ಅಯ್ಯನಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಹೇಳಿದರು.

ಕಡೂರು ತಾಲ್ಲೂಕಿನ ಐತಿಹಾಸಿಕ ಅಯ್ಯನಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ತಮ್ಮ ಸಹೋದರ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹಾಗೂ ಕುಟುಂಬದ ಸದಸ್ಯರೊಂದಿಗೆ ಕೆರೆಗೆ ಬುಧವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಅಯ್ಯನಕೆರೆ ಬಯಲುಸೀಮೆಯ ರೈತರ ಜೀವನಾಡಿಯಾಗಿದ್ದು, ಐದು ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಈ ಕೆರೆಯನ್ನು ನಂಬಿ ಬದುಕುತ್ತಿವೆ. ತಾನು ಮತ್ತು ತಮ್ಮ ಸಹೋದರರೂ ಸಹ ಕೆರೆಯ ಅಚ್ಚುಕಟ್ಟುದಾರರಾಗಿರುವ ಹಿನ್ನೆಲೆಯಲ್ಲಿ ಅದರ ಅಭಿವೃದ್ದಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.

ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಯಾತ್ರಿ ನಿವಾಸ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನೂ ಒದಗಿಸಲಾಗುವುದು, ಸಖರಾಯಪಟ್ಟಣದಿಂದ ಉದ್ದೇಬೋರನಹಳ್ಳಿ ಮುಖಾಂತರ ಅಯ್ಯನಕೆರೆಗೆ ತೆರಳುವ ರಸ್ತೆಯನ್ನು ತಾವು ಶಾಸಕರಾಗಿದ್ದ ಅವಧಿಯಲ್ಲಿ ಮೇಲ್ದರ್ಜೆಗೇರಿಸಲಾಗಿದ್ದು, ಇದೀಗ 16.5 ಕೋಟಿ ರೂ ವೆಚ್ಚದಲ್ಲಿ ಆ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ಮಳೆ ನೀರನ್ನು ಪೋಲಾಗಲು ಬಿಡದಂತೆ ರಾಜ್ಯದಲ್ಲೇ ಹಿಡಿದಿಡುವ ಯೋಜನೆಯನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಲಾಗುವುದು ಎಂದರು.

ಇದಕ್ಕೂ ಮುನ್ನ ಕುಟುಂಬ ಸಮೇತ ಅಗಮಿಸಿದ ಎಸ್.ಎಲ್.ಧರ್ಮೇಗೌಡ ಮತ್ತು ಎಸ್.ಎಲ್.ಭೋಜೇಗೌಡ ಸಹೋದರರು ಕೆರೆಯ ದಂಡೆಯಲ್ಲಿರುವ ಐತಿಹಾಸಿಕ ಬಳ್ಳಾಳೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿ ಪ್ರತಿ ವರ್ಷ ಇದೇ ರೀತಿ ಮಳೆ ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ನಂತರ ಅಯ್ಯನಕೆರೆಗೆ ತೆರಳಿ ಗಂಗಾಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿದರು. ಇದೇ ವೇಳೆ ಕೆರೆಯ ಅಚ್ಚುಕಟ್ಟುದಾರರು ಸಹೋದರರನ್ನು ಸನ್ಮಾನಿಸಿದರು. 4 ವರ್ಷಗಳ ನಂತರ ಕೆರೆ ಮೈದುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರು ಮತ್ತು ಪ್ರವಾಸಿಗರು ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡಿ ವೀಕ್ಷಿಸುತ್ತಿದ್ದು, ಕೆರೆಯ ಆವರಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಬಳ್ಳಾಳೇಶ್ವರ ಸೇವಾ ಸಮಿತಿ ಅಧ್ಯಕ್ಷ ಕಲ್ಮರುಡಪ್ಪ, ತಾಪಂ ಸದಸ್ಯ ಹಳೇಹಟ್ಟಿ ಆನಂದನಾಯ್ಕ, ಎಪಿಎಂಸಿ ಸದಸ್ಯ ಪಿಳ್ಳೇನಹಳ್ಳಿ ಲೋಕೇಶ್, ಕಡೂರು ತಹಶೀಲ್ದಾರ್ ಭಾಗ್ಯಮ್ಮ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News