ಮಲೆನಾಡಿನಲ್ಲಿ ಬಿಡುವು ನೀಡಿದ ಮಳೆ: ಉಸ್ತುವಾರಿ ಸಚಿವರಿಂದ ಅತೀವೃಷ್ಟಿ ಸ್ಥಳ ಪರಿಶೀಲನೆ

Update: 2018-08-15 17:25 GMT

ಚಿಕ್ಕಮಗಳೂರು, ಆ.15: ಕಳೆದ 6 ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಆರ್ಭಟ ಬುಧವಾರ ಜಿಲ್ಲಾದ್ಯಂತ ಕೊಂಚ ಕಡಿಮೆಯಾಗಿದೆಯಾದರೂ, ಎಡಬಿಡದೆ ಸುರಿಯುತ್ತಿರುವ ಸಾಧಾರಣ ಮಳೆಯಿಂದಾಗಿ ಮಲೆನಾಡು ಭಾಗದ ಜೀವನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿಪಾತ್ರದ ತೋಟ, ಹೊಲಗದ್ದೆಗಳಿಗೆ ನೀರು ನುಗಿ ಅಪಾರ ನಷ್ಟ ಸಂಭವಿಸಿದೆ.

ಜಿಲ್ಲೆಯ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಬುಧವಾರವೂ ಎಡಬಿಡದೆ ಮಳೆಯಾಗುತ್ತಿದೆ. ಮಳೆಯಿಂದಾಗಿ ಇಲ್ಲಿನ ಪ್ರಮುಖ ನದಿಗಳಾದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳೂ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿವೆ. ಪರಿಣಾಮ ನದಿ ಪಾತ್ರದ ಅಡಿಕೆ ತೋಟ, ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು, ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.

ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಮಳೆ ಕೊಂಚ ಬಿಡುವು ನೀಡಿದ್ದರೂ ಆಗಾಗ್ಗೆ ಭಾರೀ ಮಳೆಯಾಗುತ್ತಿದೆ. ಚಾರ್ಮಾಡಿ ಘಾಟ್‍ನಲ್ಲಿ ಮಂಜು ಕವಿದ ವಾತಾವರಣದಿಂದಾಗಿ ಪ್ರವಾಸಿಗರ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ತಾಲೂಕು ವ್ಯಾಪ್ತಿಯಲ್ಲಿರುವ ಕಳಸ ಹೋಬಳಿಯಾದ್ಯಂತ ಸಾಧಾರಣ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿವ ಹರಿವು ಹೆಚ್ಚಿದೆಯಾದರೂ ಮಂಗಳವಾರ ಮುಳುಗಿದ್ದ ಕಳಸ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಬುಧವಾರ ಸಂಚಾರಕ್ಕೆ ಮುಕ್ತವಾಗಿದೆ. ಬುಧವಾರ ಸೇತುವೆ ಮಟ್ಟದಲ್ಲಿ ನೀರು ಹರಿಯುತ್ತಿದೆ. ಮಂಗಳವಾರ ಸಂಜೆ ಕಳಸ ಪಟ್ಟಣ ಸಮೀಪದ ಬೇಡಕ್ಕಿ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಕೋಣೇಬೈಲು, ಹಡ್ಲಮನೆ ಎಂಬಲ್ಲಿನ ಹತ್ತಾರು ಎಕರೆ ಭತ್ತಗದ್ದೆಗಳು ಜಲಾವೃತಗೊಂಡಿವೆ. 

ಶೃಂಗೇರಿ ತಾಲೂಕಿನಾದ್ಯಂತ ಕೆರೆಕಟ್ಟೆ, ಕಿಗ್ಗಾ, ನೆಮ್ಮಾರಿನಲ್ಲಿ ಬುಧವಾರ ಬೆಳಗಿನಿಂದ ನಿರಂತರವಾಗಿ ಸಾಧಾರಣ ಮಳೆಯಾಗುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಂಗಳವಾರ ತಾಲೂಕಿನ ನೆಮ್ಮಾರು, ಕೆರೆಕಟ್ಟೆ ಮೂಲಕ ಹಾದು ಹೋಗಿರುವ ಶೃಂಗೇರಿ-ಮಂಗಳೂರು ಸಂಪರ್ಕದ ರಾಜ್ಯ ಹೆದ್ದಾರಿ ಮೇಲೆ ತುಂಗಾ ನದಿ ನೀರು ಆವರಿಸಿದ ಪರಿಣಾಮ ಹೆದ್ದಾರಿ ಬಂದ್ ಆಗಿತ್ತು. ಆದರೆ ಬುಧವಾರ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ ಎಂದು ತಿಳಿದು ಬಂದಿದೆ. ಶೃಂಗೇರಿ ಪಟ್ಟಣ ಬುಧವಾರವೂ ಜಲಾವೃತಗೊಂಡಿದೆ.

ಇನ್ನು ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗೆ ಸಾಧಾರಣ ಮಳೆ ಸುರಿಯುತ್ತಿದ್ದು, ತಾಲೂಕು ವ್ಯಾಪ್ತಿಯ ಮೇಗುಂದಾ ಹೋಬಳಿ ವ್ಯಾಪ್ತಿಯ ಜಯಪುರದ ಗುಡ್ಡೆತೋಟ ಸೇರಿದಂತೆ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಕುಸಿದು ಗ್ರಾಮಗಳು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಎದುರಾಗಿದೆ. ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇನ್ನು ಎನ್.ಆರ್.ಪುರ, ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುತ್ತಿದೆ. ಒಟ್ಟಾರೆ ಕಳೆದ 5 ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆ ಬುಧವಾರ ಕೊಂಚ ವಿರಾಮ ನೀಡಿದೆ.

ಉಸ್ತುವಾರಿ ಸಚಿವರಿಂದ ಅತಿವೃಷ್ಟಿ ಹಾನಿ ಪರಿಶೀಲನೆ:
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಬುಧವಾರ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಹಾಗೂ ಶಾಸಕ ರಾಜೇಗೌಡ ಅವರೊಂದಿಗೆ ಮಲೆನಾಡಿನ ಕೊಪ್ಪ,ಶೃಂಗೇರಿ, ಎನ್.ಆರ್ ಪುರ ತಾಲೂಕು ವ್ಯಾಪ್ತಿಯಲ್ಲಿ ಅತೀವೃಷ್ಟಿ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು. 

ಕೊಪ್ಪ ತಾಲೂಕಿನ ಜಯಪುರ ಪಟ್ಟಣದ ಸಮೀಪದ ಶೃಂಗೇರಿ-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಮಣ್ಣು ಕುಸಿತವಾಗಿರುವ ಸ್ಥಳ ಪರಿಶೀಲಿಸಿದ ಅವರು, ರಸ್ತೆ ದುರಸ್ತಿ ಸಂಬಂಧ ಸರಕಾರದ ಮಟ್ಟದಲ್ಲಿ ಚರ್ಚಿಸುವ ಭರವಸೆ ನೀಡಿದರು. ನಂತರ ಕೊಗ್ರೆ ಸಮೀಪದ ಭೂಕಂಪನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಶೃಂಗೇರಿಗೆ ತರಳಿದ ಅವರು ತುಂಗಾ ನದಿಯ ನೆರೆ ನೀರಿನಿಂದಾದ ಹಾನಿಯನ್ನು ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News