ಗಂಗಾವತಿ: ಮೈತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ; ಕಂಪ್ಲಿ ಸೇತುವೆ ಮುಳುಗಡೆ

Update: 2018-08-15 17:44 GMT

ಗಂಗಾವತಿ,ಆ.15: ತುಂಗಭದ್ರ ಜಲಾಶಯದಿಂದ 1.75 ಲಕ್ಷ ಕ್ಕೂ ಹೆಚ್ಚು ಕ್ಯೂಸಕ್ ನೀರು ನದಿಗೆ ಬಿಟ್ಟಿದರಿಂದ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸಂಪರ್ಕದ ಕೊಂಡಿಯಾದ ಕಂಪ್ಲಿ-ಕೋಟೆಯ ತುಂಗಾಭದ್ರ ನದಿ ಸೇತುವೆ ಸಂಪೂರ್ಣವಾಗಿ ಭರ್ತಿಯಾಗುವ ಮೂಲಕ ಸಂಪರ್ಕ ಕಡಿತಗೊಂಡಿದೆ. 

ಕಳೆದ ವಾರದಿಂದ ಮಲೆನಾಡು ಪ್ರದೇಶದಲ್ಲಿ ಮಳೆಯ ನರ್ತನ ಹೆಚ್ಚಾಗಿದ್ದರಿಂದ ಆ ಭಾಗದ ಜಲಾಶಯಗಳು ಉಕ್ಕಿ ಹರಿಯುವ ಜೊತೆಗೆ ಬಳ್ಳಾರಿ-ಕೊಪ್ಪಳ ಜಿಲ್ಲೆಗಳ ರೈತರ ಜೀವನಾಡಿಯಾದ ತುಂಗಭದ್ರ ಜಲಾಶಯ ತುಂಬಿದೆ. ತುಂಗಭದ್ರ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾದಂತೆಲ್ಲಾ, ಹೊರ ಹರಿವು ಕೂಡ ಹೆಚ್ಚಾಗತೊಡಗಿದೆ. ನಿನ್ನೆ ಮಧ್ಯಾಹ್ನದ ವೇಳೆಗೆ 1 ಲಕ್ಷ 08 ಸಾವಿರ ಕ್ಯೂಸಕ್‍ನಷ್ಟು ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ಐತಿಹಾಸಿಕ ಹಂಪಿ ದೇಗುಲಗಳು ಜಲಾವೃತಗೊಂಡಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಕಂಪ್ಲಿ-ಕೋಟೆಯ ಸೇತುವೆ ಮುಳುಗಡೆಯಾಗಿದೆ. 

ನದಿಯಲ್ಲಿ ನೀರಿಯ ಹರಿವು ವಿಪರೀತವಾಗಿ ಹೆಚ್ಚಾಗಿದರಿಂದ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. 1992ರಲ್ಲಿ ತುಂಗಭದ್ರ ಜಲಾಶಯ ತುಂಬಿ, ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿತ್ತು. ಆದರೆ, ಈಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ನದಿ ಭಾಗದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.

ಈಗಾಗಲೇ ಕಂಪ್ಲಿ-ಕೋಟೆ ಬಳಿಯ ದೇವಸ್ಥಾನಗಳು ಹಾಗೂ ಮನೆಗಳಿಗೆ ನೀರು ನುಗ್ಗಿವೆ. ಕಂಪ್ಲಿ-ಕೋಟೆ ಬಳಿಯ ಭತ್ತ ಹಾಗೂ ಬಾಳೆ ತೋಟಗಳಿಗೆ ನೀರು ನುಗ್ಗಿದೆ. ಕೋಟೆಯ ಪ್ರಸನ್ನ ವೆಂಕಟರಮಣ ದೇವಸ್ಥಾನ ನೀರಿನಿಂದ ಆವೃತವಾಗಿದ್ದು, ನದಿ ದಡದಲ್ಲಿ ಹಾಕಿದ್ದ ಮೋಟರ್ ಗಳು ನೀರಿನಲ್ಲಿ ಮುಳುಗುತ್ತಿವೆ. ಮತ್ತು ಕೋಟೆ ಆಂಜಿನೇಯ ದೇವಸ್ಥಾನವು ನೀರಿನಿಂದ ಜಲಾವೃತವಾಗಿದೆ.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ನದಿ ಪಾತ್ರದ ಜನರು ಮುಜಾಗ್ರತೆ ವಹಿಸಬೇಕಾಗಿದೆ. ಕಂಪ್ಲಿ ಸೇತುವೆ ಮುಳುಗಿದ್ದರಿಂದ ಎರಡು ಜಿಲ್ಲೆಗಳ ನಡುವಿನ ಸಂಪರ್ಕ ಕಡಿತವಾಗಿದೆ. ಇದರಿಂದ ಗಂಗಾವತಿಯಿಂದ ಕಂಪ್ಲಿಗೆ ಅಥವಾ ಕಂಪ್ಲಿಯಿಂದ ಗಂಗಾವತಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಸುಮಾರು 20-25 ಕಿಮೀ ಸುತ್ತು ಹಾಕಿ ಸಂಚರಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಬಳ್ಳಾರಿ-ಕೊಪ್ಪಳ ಜಿಲ್ಲೆಗಳ ನಡುವಿನ ಸಂಪರ್ಕದ ಕಂಪ್ಲಿ-ಕೋಟೆ ಸೇತುವೆ ಮುಳಗಡೆಯಿಂದ ಶಿಥಿಲವಾಗಿದೆ.

ವಾಹನ ಸಂಚಾತ ಸ್ಥಗಿತ: ಇಲ್ಲಿನ ತುಂಗಭದ್ರ ನದಿಗೆ ಲಕ್ಷಾಂತರ ಕ್ಯೂಸಕ್ ನೀರು ಬಿಟ್ಟಿದರಿಂದ ಕಂಪ್ಲಿ-ಕೋಟೆಯ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದ ಕಂಪ್ಲಿಯಿಂದ ಗಂಗಾವತಿಗೆ ತೆರಳುವ ಸೇತುವೆ ಮೇಲಿನ ವಾಹನಗಳ ಸಂಚಾರವನ್ನು ನಿನ್ನೆ ರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದೆ. ಕಂಪ್ಲಿಯಲ್ಲಿ ಬಸ್, ಲಾರಿ ಸೇರಿದಂತೆ ಇತರೆ ವಾಹನಗಳನ್ನು ಹೊಸಪೇಟೆ ಮಾರ್ಗವಾಗಿ ತೆರಳುವಂತೆ ಸೂಚಿಸಲಾಗುತ್ತಿದೆ. ಇದರಿಂದ ವಾಹನಗಳು ಬುಕ್ಕಸಾಗರದ ನೂತನ ಸೇತುವೆ ಮೇಲೆ ಸಂಚಾರಿಸುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News