ಪ್ರೀತಿ, ಸೌಹಾರ್ದದ ಸುಭದ್ರ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕಾಗಿದೆ: ಸಚಿವ ಸಿ.ಎಸ್.ಪುಟ್ಟರಾಜು

Update: 2018-08-15 17:55 GMT

ಮಂಡ್ಯ, ಆ.15: ಜಾತಿ ಮತ ಎಂದು ಬೇಧ ಮಾಡುವ ಶಕ್ತಿಗಳನ್ನು ದಮನ ಮಾಡಿ ಸರ್ವ ಧರ್ಮೀಯರು ಪ್ರೀತಿ ಹಾಗೂ ಸೌಹಾರ್ದತೆಯಿಂದ ಬಾಳುವ ಸುಭದ್ರವಾದ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಕರೆ ನೀಡಿದ್ದಾರೆ.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜನರಿಂದ ಜನರಿಗಾಗಿ ಜನರೇ ನಡೆಸುವ ದೇಶದ ಆಡಳಿತ ವ್ಯವಸ್ಥೆ ವಿಶ್ವದಲ್ಲಿಯೇ ಮಾದರಿಯಾಗಿದೆ ಎಂದರು.

ಹಲವಾರು ಸಾಧು ಸಂತರ, ಸ್ವಾತಂತ್ರ್ಯ ಯೋಧರ, ದೇಶ ಪ್ರೇಮಿಗಳ, ಹಿರಿಯರ ಹೋರಾಟ ಹಾಗೂ ಪರಿಶ್ರಮದಿಂದ ಕಟ್ಟಿ ಬೆಳಸಿರುವ ಈ ಭವ್ಯ ಭಾರತದ ಭವಿಷ್ಯವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸವಾಲು ನಮ್ಮ ಮುಂದಿದ್ದು, ಇದರ ಯಶಸ್ಸಿಗೆ ಒಟ್ಟಾಗಿ ದುಡಿಯೋಣ ಎಂದು ಅವರು ಹೇಳಿದರು.

ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್, ದೇಶಕ್ಕೆ ಶಾಂತಿ, ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಮತ್ತಿತರ ಮಹಾನುಭಾವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಭಾರತವನ್ನು ಬ್ರಿಟೀಷರ ಆಡಳಿತದಿಂದ ಮುಕ್ತಿಗೊಳಿಸಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ವಿಶ್ವದ ಇತಿಹಾಸದಲ್ಲಿಯೇ ಮಾದರಿಯಾಗಿದೆ ಎಂದು ಅವರು ಬಣ್ಣಿಸಿದರು.

ವಚನಕಾರರ ಸಾಮಾಜಿಕ ಸಮಾನತೆ ತಳಹದಿ ಮತ್ತು ಪುರಂದರ, ಕನಕದಾಸರ ದಿವ್ಯ ಪರಂಪರೆ, ಸೌಹಾರ್ದತೆಯ ಸಂಕೇತವಾಗಿರುವ ಶಿಶುನಾಳ ಷರೀಫ, ಸೂಫಿ ಸಂತರ, ವೈಚಾರಿಕ ಸಾಹಿತ್ಯದ ಮೂಲಕ ಒಂದು ಜನಾಂಗದ ಕಣ್ಣುತೆರೆಸಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮಭೂಮಿ ಕರ್ನಾಟಕ ಎಂದು ಅವರು ಸ್ಮರಿಸಿದರು. ಆಧುನಿಕತೆಯ ಪ್ರತೀಕವಾದ ಬೆಂಗಳೂರು ಮತ್ತು ನಮ್ಮ ಶ್ರೇಷ್ಠ ಪರಂಪರೆಯ ಸಂಕೇತವಾದ ಮೈಸೂರುಗಳ ನಡುವಣ ಸೇತುವಾದ ಮಂಡ್ಯ ಜಿಲ್ಲೆಗೆ ಅದರದೆ ಆದ ಆಸ್ಮಿತೆ, ವ್ಯಕ್ತಿತ್ವ, ವೈಶಿಷ್ಟ್ಯವಿದೆ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಮದ್ದೂರಿನ ಶಿವಪುರದಲ್ಲಿ ನಡೆದ ಸತ್ಯಾಗ್ರಹ ಹೋರಾಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಪಸರಿಸಿದ ಆ ಹೋರಾಟ ಸ್ವಾತಂತ್ರ್ಯ ಚಳವಳಿಯ ಮಹತ್ವದ ಸಂಗತಿಯಾಗಿದೆ ಎಂದು ಅವರು ಅಭಿಪಾಯಪಟ್ಟರು. ಸ್ವಾತಂತ್ರ್ಯಾ ನಂತರ ಬಂದ ಎಲ್ಲಾ ಸರಕಾರಗಳು ಹಲವಾರು ಜನಪರ ಯೋಜನೆಗಳ ಮೂಲಕ ಜನರಜೀವನ ಮಟ್ಟವನ್ನು ಸುಧಾರಿಸಲು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಾ ಬಂದಿವೆ. ನಮ್ಮ ಸರಕಾರವೂ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ರೈತರ ಹಿತ ಕಾಪಾಡಲು ಸರಕಾರ ಬದ್ಧವಾಗಿದ್ದು, ರೈತರು ಆತ್ಮಹತ್ಯೆ ಹಾದಿ ಹಿಡಿಯಬಾರದು ಎಂದು ಅವರು ಮನವಿ ಮಾಡಿದರು. 

ಶಾಸಕ ಎಂ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಉಪಾ
ಧ್ಯಕ್ಷೆ ಗಾಯತ್ರಿ, ನಗರಸಭೆ ಅಧ್ಯಕ್ಷ ಶಹಜಹಾನ್, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಎಸ್ಪಿ, ಜಿಪಂ ಸಿಇಒ ಯಾಲಕ್ಕಿಗೌಡ, ಇತರ ಗಣ್ಯರು ಹಾಜರಿದ್ದರು.

ಇದಕ್ಕೂ ಮುನ್ನ ವಿವಿಧ ಶಾಲೆಗಳ ಮಕ್ಕಳು ಪ್ರಸ್ತುತಪಡಿಸಿದ ದೇಶಪ್ರೇಮದ ನೃತ್ಯ ರೂಪಕ, ವಿವಿಧ ಇಲಾಖೆಗಳ ಜಾಗೃತಿ ಮೂಡಿಸುವ ಸ್ಥಬ್ಧಚಿತ್ರಗಳ ಮೆರವಣಿಗೆ ಹಾಗೂ ಪಥಸಂಚಲನ ಪ್ರೇಕ್ಷಕರ ಗಮನ ಸೆಳೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News