ಕೊಡಗಿನಲ್ಲಿ ಮುಂದುವರೆದ ಮಳೆಯ ಆರ್ಭಟ: ವಿದ್ಯುತ್ ತಂತಿ ತಗುಲಿ ಮಹಿಳೆ ಮೃತ್ಯು

Update: 2018-08-15 18:10 GMT

ಮಡಿಕೇರಿ, ಆ.15: ಕೊಡಗು ಜಿಲ್ಲೆಯಲ್ಲಿ ಮಹಾಮಳೆ ಮುಂದುವರೆದಿದ್ದು, ಅತಿವೃಷ್ಟಿಯಿಂದ ಹಾನಿ ಹೆಚ್ಚುತ್ತಲೇ ಇದೆ. ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆ ಮತ್ತೆ ಕುಸಿದಿದ್ದು, ಮಣ್ಣು ರಸ್ತೆಯನ್ನು ಆವರಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಬೊಲೇರೊ ಜೀಪೊಂದು ಬಲಬದಿಯ ಹೊಳೆಗೆ ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ಎರಡು ದಿನಗಳ ಹಿಂದೆ ಮದೆನಾಡು ಬಳಿ ಗುಡ್ಡ ಕುಸಿದ ಪರಿಣಾಮ ಬಿದ್ದಿರುವ ಮಣ್ಣಿನ ರಾಶಿಯ ತೆರವು ಕಾರ್ಯಾಚರಣೆ ಇನ್ನೂ ಪೂರ್ಣಗೊಂಡಿಲ್ಲ. ಮಣ್ಣು ತೆಗೆದಂತೆ ಗುಡ್ಡ ಕುಸಿಯುತ್ತಿರುವುದಲ್ಲದೆ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ. ಸುಮಾರು ಏಳು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಮಡಿಕೇರಿ ನಗರದ ಇಂದಿರಾನಗರ ಬಡಾವಣೆಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳ ಮೇಲೆ ಬರೆ ಕುಸಿದು ಬಿದ್ದು, ಅಪಾಯದ ಮುನ್ಸೂಚನೆ ಎದುರಾಗಿದೆ. ಮತ್ತಷ್ಟು ಮನೆಗಳು ಅಪಾಯದಂಚಿನಲ್ಲಿದ್ದು, ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಕೆಲವು ನಿವಾಸಿಗಳಿಗೆ ನಗರಸಭೆ ಸೂಚನೆ ನೀಡಿದೆ. ತಾಳತ್ತಮನೆಯ ತೋಟವೊಂದರಲ್ಲಿ ಭಾರೀ ಗಾಳಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಲ್ಲನ ಅಮ್ಮವ್ವ ಎಂಬವರು ಮೃತಪಟ್ಟಿದ್ದಾರೆ. ಅಂತರ್ಜಲಮಟ್ಟ ಹೆಚ್ಚಾಗಿ ಹಟ್ಟಿಹೊಳೆ ರಸ್ತೆ ಮಧ್ಯಭಾಗದಲ್ಲಿ ಕುಸಿದು ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಜೀವನದಿ ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದರೆ, ಮಳೆಯಾರ್ಭಟಕ್ಕೆ ಕುಸಿಯುತ್ತಿರುವ ಗುಡ್ಡಗಳಿಂದ ಹಲವು ಕುಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆಗಳಲ್ಲಿ ರಸ್ತೆಗಳು ಬಿರುಕು ಬಿಟ್ಟು ಬರೆಕುಸಿದು ವಾಹನ ಸಂಚಾರ ಅಸಾಧ್ಯವಾಗಿದೆ. ಭಾರೀ ಮಳೆಯಿಂದ ಮರಗಳು, ವಿದ್ಯುತ್ ಕಂಬಗಳು ಅಲ್ಲಲ್ಲಿ ಧರೆಗುರುಳಿದೆ.

ಕಾವೇರಿ ಸನ್ನಿಧಿಯಲ್ಲಿ ಪ್ರವಾಹ
ಕಳೆದೊಂದು ದಿನದ ಅವಧಿಯಲ್ಲಿ ತಲಕಾವೇರಿ ಮತ್ತು ಭಾಗಮಂಡಲ ವಿಭಾಗದಲ್ಲಿ 10 ಇಂಚಿಗೂ ಹೆಚ್ಚಿನ ಮಳೆಯಾಗಿದ್ದು, ಭಾಗಮಂಡಲದ ಮಡಿಕೇರಿ ಮತ್ತು ಅಯ್ಯಂಗೇರಿ ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರ ಸಂಚಾರ ವಿರಳವಾಗಿದ್ದರೂ ಮುಂಜಾಗೃತಾ ಕ್ರಮವಾಗಿ ರ್ಯಾಫ್ಟಿಂಗ್ ಹಾಗೂ ಬೋಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿನ ಕಿರುತೊರೆಗಳು ಉಕ್ಕಿ ಹರಿಯುತ್ತಿರುವುದರಿಂದ ಹಲವಾರು ಗ್ರಾಮಗಳು ಜಲಾವೃತಗೊಂಡು ಆತಂಕ ಸೃಷ್ಟಿಯಾಗಿದೆ. ಮುಕ್ಕೋಡ್ಲು, ಹಮ್ಮಿಯಾಲ ಸುತ್ತಮುತ್ತಲ್ಲ ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಪಟ್ಟಿದ್ದು, ಮುಕ್ಕೋಡ್ಲುವಿನ ನಾಪಂಡ ರವಿ ಕಾಳಪ್ಪ ಎಂಬುವವರ ಒಂದೂವರೆ ಎಕರೆಯಷ್ಟು ಕಾಫಿ ತೋಟ ಎತ್ತರದ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಕುಸಿದು ಹೋಗಿದೆ. ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿದ್ದು, ಕೃಷಿಕರು ಕಂಗೆಟ್ಟಿದ್ದಾರೆ.

ಸುಂಟಿಕೊಪ್ಪ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಕೆದಕಲ್ ಬಳಿ ರಸ್ತೆ ಕುಸಿಯುತ್ತಿದ್ದು, ವಾಹನ ಚಾಲಕರಿಗೆ ಪೊಲೀಸರು ಮುನ್ನೆಚ್ಚರಿಕೆಯನ್ನು ನೀಡುತ್ತಿದ್ದಾರೆ. ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸುವ ಮೂಲಕ ವಾಹನಗಳ ಸಂಚಾರ ಮತ್ತು ವೇಗವನ್ನು ನಿಯಂತ್ರಿಸಲಾಗುತ್ತಿದೆ. ಪ್ರವಾಸಿಗರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಮಡಿಕೇರಿ ಭಾಗಕ್ಕೆ ತೆರಳದಂತೆ ಸೂಚಿಸಲಾಗುತ್ತಿದೆ.

2000 ಕೋಳಿಗಳು ನೀರು ಪಾಲು

ಕೊಡಗು ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಮತ್ತು ಹಾರಂಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಟ್ಟಿರುವುದರಿಂದ ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿ ಹೆಬ್ಬಾಲೆಯ ಕೊಲ್ಲಿ ಹಾಗೂ ಕೂಡಿಗೆ-ಕಣಿವೆ ಮಧ್ಯೆ ರಸ್ತೆಯ ಮೇಲೆ 4 ಅಡಿಯಷ್ಟು ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ನದಿ ತಟದ ಅಕ್ಕಪಕ್ಕದಲ್ಲಿ ಹಾಗೂ ಸುತ್ತಲಿನ ಗದ್ದೆಗಳು, ಕೃಷಿ ಭೂಮಿ ಹಾಗೂ ಹಲವು ಮನಗಳು ನೀರಿನಿಂದಾವೃತ್ತಗೊಂಡಿವೆ.

ಕಾವೇರಿ ಮತ್ತು ಹಾರಂಗಿ ನದಿ ಸಂಗಮ ಸ್ಥಳ ಕೂಡಿಗೆಯಿಂದ ಮುಂದೆ ಹರಿಯುವ ಕಾವೇರಿ ನದಿಗೆ ಕಣಿವೆ ಹತ್ತಿರ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯು ಪೂರ್ತಿ ಮುಳುಗಡೆಗೊಂಡಿದ್ದು, ಕಾವೇರಿ ನದಿ ದಡದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರಿನಲ್ಲಿರುವ ಮೆಟ್ಟಿಲುಗಳು ಸಹ ಮುಳುಗಿವೆ.

ಅಣೆಕಟ್ಟೆಯಿಂದ ರಾತ್ರಿ ಹೆಚ್ಚು ನೀರು ನದಿಗೆ ಹರಿಸಿದ ಪರಿಣಾಮ ಕಾವೇರಿ ಮತ್ತು ಹಾರಂಗಿ ಸಂಗಮದ ನೀರು ಕೂಡಾ ಹೆಚ್ಚಳದ ಪರಿಣಾಮ ನದಿ ದಂಡೆಯಿಂದ ಅರ್ಧ ಕಿ.ಮೀ ದೂರದವರೆಗೂ ಹರಿಯುತ್ತಿರುವ ನೀರು ಹಳೆ ಕೂಡಿಗೆ ಗ್ರಾಮದ ಸೋಮಾಚಾರಿ ಎಂಬುವವರ ಮನೆಗೆ ನುಗ್ಗಿದೆ. ಅಲ್ಲದೆ, ಪಕ್ಕದಲ್ಲೇ ಕೋಳಿ ಫಾರಂನಲ್ಲಿದ್ದ 2000 ಕ್ಕು ಹೆಚ್ಚು ಕೋಳಿಗಳು ಹಾಗೂ ಕೋಳಿ ಆಹಾರವೂ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿವೆ.

ಹಾರಂಗಿ-ಕೂಡಿಗೆ ಸಂಗಮದವರೆಗೆ ನೀರಿನ ಪ್ರಮಾಣದ ಹೆಚ್ಚಳದಿಂದ ಕೂಡಿಗೆ ಸರ್ಕಲ್‍ನ ಭೋಜರಾಜ್, ಅಣ್ಣಯ್ಯ, ರಾಮಕೃಷ್ಣ, ಕೆ.ಎಂ.ಚಂದ್ರುಮೂಡ್ಲಿಗೌಡ ಎಂಬುವವರ ಮನೆಗೂ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಅಲ್ಲದೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ, ಹುದುಗೂರು ಭಾಗಗಳಲ್ಲಿನ ಶುಂಠಿ, ಕೆಸ, ಕೇನೆ, ಜೋಳ, ಭತ್ತದ ಜಮೀನುಗಳೂ ಸಹ ಜಲಾವೃತಗೊಂಡಿವೆ.

ಮಳೆಯ ಆರ್ಭಟಕ್ಕೆ ತತ್ತರಿಸಿರುವ ಜನರ ಜೀವನ ಅಸ್ಥವ್ಯಸ್ಥಗೊಂಡದೆ. ಬುಧವಾರ ಮಳೆಯ ಪ್ರಮಾಣ ತಗ್ಗಿದರೂ ಸಹ ನೀರಿನ ಪ್ರಮಾಣ ಹೆಚ್ಚಾಗಿದೆ. ಕುಶಾಲನಗರದ ಸಾಯಿ ಬಡಾವಣೆಯಲ್ಲಿ  ಹಲವು ಮನೆಗಳು ಜಲಾವೃತಗೊಂಡಿದ್ದು, ಅಂದಾಜು 17 ಕುಟುಂಬಗಳನ್ನು ಸ್ಥಳಾಂತರಿಸಿರುವ ಬಗ್ಗೆ ವರದಿಯಾಗಿದೆ.

ಅಂತರ್ಜಲಕ್ಕೆ ಕುಸಿದ ರಸ್ತೆ
ಬಾಯ್ದೆರೆದ ರಸ್ತೆ-ಸಂಪರ್ಕ ಕಡಿತ: ಮಡಿಕೇರಿ-ಸೋಮವಾರಪೇಟೆ ಮುಖ್ಯ ರಸ್ತೆಯ ಹಟ್ಟಿಹೊಳೆ ವಿಭಾಗದಲ್ಲಿ ಮುಖ್ಯ ರಸ್ತೆ ಅಪಾಯಕಾರಿಯಾಗಿ ಬಿರುಕು ಬಿಟ್ಟಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಡಿಕೇರಿಯಿಂದ ಸಿದ್ದಾಪುರಕ್ಕೆ ತೆರಳುವ ಹಾದಿಯ ಚೆಟಳ್ಳಿ ಸಮೀಪ ಭಾರೀ ಗುಡ್ಡ ಕುಸಿತವಾಗಿದ್ದು ಸಂಚಾರ ಅಸಾಧ್ಯವಾಗಿ ಪರಿಣಮಿಸಿದೆ. ಮಡಿಕೇರಿ ನಗರದ ಸಮೀಪವಿರುವ ಕಾಲೂರು, ಮುಕ್ಕೋಡ್ಲು ವಿಭಾಗಗಳ ಹತ್ತಕ್ಕೂ ಹೆಚ್ಚಿನ ಕಡೆಗಳಲ್ಲಿ ಭಾರೀ ಬರೆ ಕುಸಿತಗಳು ಸಂಭವಿಸಿದೆ. ಇದರಿಂದ ಸಂಚಾರ ಸ್ಥಗಿತಗೊಂಡು ಗ್ರಾಮಸ್ಥರು ತೀವ್ರ ಆತಂಕಕ್ಕೆ ಸಿಲುಕಿದ್ದು, ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ಕಾಲೂರು ಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.

ಮಡಿಕೇರಿ-ಮಂಗಳೂರು ರಸ್ತೆಯ ಅಂದಾಜು 11 ಕಿ.ಮೀ. ದೂರದ ನಿಶಾನೆಮೊಟ್ಟೆ ಎಂಬಲ್ಲಿ ಬೊಲೆರೋ ವಾಹನ ಬರೆ ಕುಸಿತದ ಮಣ್ಣಿನೊಂದಿಗೆ ಹಳ್ಳಕ್ಕೆ ಬಿದ್ದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆಕುಸಿತದ ಘಟನೆ ನಿರಂತರವಾಗಿ ಮುಂದುವರಿದಿದ್ದು, ಸಮರೋಪಾದಿಯ ತೆರವು ಕಾರ್ಯಾಚರಣೆಗಳಿಂದಲೂ ಸಂಚಾರಕ್ಕೆ ಮಾರ್ಗ ತೆರೆದುಕೊಳ್ಳಲು ಸಾಧ್ಯವಾಗಿಲ್ಲ. ಮಡಿಕೇರಿಯ ಇಂದಿರಾನಗರ, ಚಾಮುಂಡೇಶ್ವರಿ ಬಡಾವಣೆಯ ಹತ್ತಕ್ಕೂ ಹೆಚ್ಚಿನ ಮನೆಗಳ ಮೇಲೆ ಬರೆ ಕುಸಿದಿದ್ದು, ಇವುಗಳಲ್ಲಿ ನಾಲ್ಕು ಮನೆ ಸಂಪೂರ್ಣ ಜಖಂ ಗೊಂಡಿದ್ದು, ಉಳಿದ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

ನದಿ ಪಾತ್ರದ ಸಿದ್ದಾಪುರ, ಕರಡಿಗೋಡು, ಕುಶಾಲನಗರ ಬಳಿಯ ಸುಂಟಿಕೊಪ್ಪ, ವೀರಾಜಪೇಟೆ ತಾಲ್ಲೂಕಿನ ಶ್ರೀಮಂಗಲ ವಿಭಾಗಗಳಲ್ಲು ಧಾರಾಕಾರ ಮಳೆಯಾಗುತ್ತಿದ್ದು, ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿರುವ ಬಗ್ಗೆ ನಿರಂತರವಾಗಿ ವರದಿಯಾಗುತ್ತಲೆ ಇದೆ.

ಪ್ರವಾಸಿಗರೇ ಬರಬೇಡಿ
ನಿರಂತರ ಮಳೆಯಿಂದ ಕೊಡಗಿನ ಪ್ರವಾಸೋದ್ಯಮಕ್ಕೂ ದಕ್ಕೆಯಾಗಿದೆ. ಜಿಲ್ಲೆಯ ಬಹುತೇಕ ಎಲ್ಲಾ ಪ್ರವಾಸಿತಾಣಗಳು ಅಪಾಯದಂಚಿನಲ್ಲಿದ್ದು, ಸಧ್ಯಕ್ಕೆ ಕೊಡಗಿನ ಕಡೆಯ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News