ಮಡಿಕೇರಿ: ಮಹಾಮಳೆಯ ನಡುವೆ ತೆಪ್ಪದ ಮೇಲೆ ನಿಂತುಕೊಂಡೇ ಸ್ವಾತಂತ್ರೋತ್ಸವ ಆಚರಣೆ

Update: 2018-08-15 18:13 GMT

ಮಡಿಕೇರಿ, ಆ.15: ಭಾರೀ ಮಳೆ, ಪ್ರವಾಹದ ನಡುವೆಯೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದಲ್ಲಿ ಪುಟಾಣಿ ಮಕ್ಕಳು ತೆಪ್ಪದ ಮೇಲೆ ನಿಂತುಕೊಂಡೇ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಿದ್ದಾಪುರ ಬಳಿಯ ನೆಲ್ಯಹುದಿಕೇರಿಯ ನಲ್ವತ್ತೆಕ್ರೆಯ ಬರಡಿ ಒಂದು ಸಣ್ಣ ಗ್ರಾಮ. ಇಲ್ಲಿ ಅಂದಾಜು 80 ರಿಂದ 90 ಕುಟುಂಬಗಳು ವಾಸವಿದ್ದು, ಕಳೆದ ಒಂದು ದಶಕದಿಂದ ಈ ಗ್ರಾಮದ ಕೂರ್ಗ್ ಫ್ರೆಂಡ್ಸ್ ಕ್ಲಬ್ ಗ್ರಾಮದಲ್ಲಿ ತ್ರಿವರ್ಣ ಧ್ವಜಾರೋಹಣದೊಂದಿಗೆ ನಡೆಸುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಮಂಗಳವಾರ ಮತ್ತಷ್ಟು ಹೆಚ್ಚಿ ರಾತ್ರಿಯ ಅವಧಿಯಲ್ಲೆ ಕಾವೇರಿಯ ಪ್ರವಾಹ ಉಕ್ಕಿ, ಇವರು ತ್ರಿವರ್ಣ ಧ್ವಜಾರೋಹಣ ಮಾಡುವ ಧ್ವಜ ಸ್ತಂಭ ನೀರಿನಿಂದ ಆವೃತ್ತವಾಗಿತ್ತು. ಬುಧವಾರ ಬೆಳಗ್ಗೆ ಕ್ಲಬ್ ಪದಾಧಿಕಾರಿಗಳು ನೀರಿನ ನಡುವೆಯೇ ಧ್ವಜಾರೋಹಣ ಮಾಡಿದರೆ, ನೆಲ್ಯಹುದಿಕೇರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಪುಟಾಣಿಗಳು ಧ್ವಜ ಸ್ತಂಭದ ಬಳಿಯೇ ತೆಪ್ಪದ ಮೇಲೆ ನಿಂತು ತ್ರಿವರ್ಣ ಧ್ವಜಕ್ಕೆ ಗೌರವ ಸೂಚಿಸುವ ಮೂಲಕ ಇಡೀ ಗ್ರಾಮಸ್ಥರು ಹೆಮ್ಮೆಯಿಂದ ಬೀಗುವಂತೆ ಮಾಡಿ ಗಮನ ಸೆಳೆದಿದ್ದಾರೆ.

ಸ್ವಾತಂತ್ರೋತ್ಸವದಲ್ಲಿ ಸಿಪಿಐಎಂ ಮುಖಂಡ ಪಿ.ಆರ್. ಭರತ್ ನೀರಿನ ನಡುವೆಯೇ ನಿಂತು ಉತ್ಸಾಹ ಭರಿತ ಭಾಷಣವನ್ನು ಮಾಡಿದ್ದಾರೆ. ಆದರೆ, ಇವೆಲ್ಲವುಗಳನ್ನು ಮೀರಿ ರಾಷ್ಟ್ರದೆಡೆಗಿನ ಮಕ್ಕಳ ಅಭಿಮಾನ ಇಲ್ಲಿ ಎಲ್ಲರ ಗಮನ ಸೆಳೆದಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News