ಮಕ್ಕಳ ಚಲನವಲನದ ಬಗ್ಗೆ ಪೋಷಕರು ಅರಿಯುವುದು ಅಗತ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-08-16 11:23 GMT

ತುಮಕೂರು,ಆ.16: ಪರಶುರಾಂ ವಾಗ್ಮೋರೆಯಂತಹ ಯುವಕರು ಹಾದಿ ತಪ್ಪುತ್ತಿದ್ದರೂ ತಂದೆ ತಾಯಿಗಳು ತನ್ನ ಮಗ ಏನು ಮಾಡುತ್ತಿದ್ದಾನೆಂಬುದು ತಿಳಿಯದೆ ನೋವು ಅನುಭವಿಸುವಂತಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಎಸ್.ಎಸ್.ಪುರಂನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜ್ಞಾನಬುತ್ತಿ ಸತ್ಸಂಗದ 475ನೇ ಕಾರ್ಯಕ್ರಮದ ಅಂಗವಾಗಿ ನೂತನ ಪದಾಧಿಕಾರಿಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಒಂದು ಮುಖವನ್ನಷ್ಟೇ ನೋಡುವ ಪೋಷಕರಿಗೆ ಮಗ ತಪ್ಪು ಹೆಜ್ಜೆ ಇಟ್ಟು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುವುದು ಗೊತ್ತಿರುವುದಿಲ್ಲ. ಹಾಗಾಗಿಯೇ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಒಡಿಸ್ಸಾ, ಅಸ್ಸಾಂ, ತಮಿಳುನಾಡು ಮತ್ತು ಆಂಧ್ರಪ್ರದೇಶವೂ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮತ್ತು ರಾಜಕೀಯ ಬೆಳವಣಿಗೆಗಳು ಆತಂಕವನ್ನುಂಟು ಮಾಡುತ್ತಿವೆ. ದೇಶದೊಳಗೆ ಇರುವ ಮೇಲುಕೀಳಿನ ಭಾವನೆ ಹೋಗಬೇಕು. ಸರ್ವ ಸಮತೆ ಮೂಡಬೇಕು. ಇದು ದೊಡ್ಡ ಆಶಯವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಆಶಿಸಿದಂತೆ ಅದು ನಮ್ಮ ಬದುಕಾಗಬೇಕು. ಆದರೆ ಅದು ನಡೆಯುತ್ತಿಲ್ಲ ಎಂದು ಹೇಳಿದರು.

ಬಹುತ್ವದ ಭಾರತ ಸೀಳಿಕೊಂಡ ಭಾರತದಂತೆ ಕಂಡು ಬರುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಅವರು. ಜಗತ್ತಿಗೆ ಅಪಾಯವನ್ನುಂಟು ಮಾಡುವ ಸ್ಥಿತಿ ಎಲ್ಲೆಡೆ ನಿರ್ಮಾಣವಾಗುತ್ತಿದೆ. ಭಾರತದೊಳಗೆ ಸಾಕಷ್ಟು ಧರ್ಮಗಳು ಇವೆ, ಧರ್ಮಗ್ರಂಥ ಗಳಿಲ್ಲದ ಅನೇಕ ಧರ್ಮಗಳು ಇವೆ, ಅಲೆಮಾರಿ ಸಮುದಾಯಗಳು ಈಗಷ್ಟೇ ಅಕ್ಷರ ಕಲಿಯಲು ಮುಂದಾಗಿದೆ. ಅಂಥ ಸಮುದಾಯಗಳ ಧಾರ್ಮಿಕ ದೃಷ್ಠಿ ಮಹೋನ್ನತವಾಗಿದ್ದು, ದೊಡ್ಡ ಧರ್ಮಗ್ರಂಥಗಳ ಶ್ರೇಷ್ಠತೆಯೊಳಗೆ ನರಳುತ್ತಿರುವರರು ನಾಚಿಕೆ ಪಟ್ಟುಕೊಳ್ಳುವಂತಹ ಧಾರ್ಮಿಕ ಸೂಕ್ಷ್ಮತೆಗಳು ಅಲೆಮಾರಿಗಳಲ್ಲಿವೆ ಎಂದು ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಯಾವುದೇ ಧರ್ಮ ಜೀವಪರವಾಗಿರಬೇಕು, ನಿಸರ್ಗಪರವಾಗಿರಬೇಕು, ಭೂಮಿಯ ಮೇಲಿರುವ ಎಲ್ಲ ಜೀವರಾಶಿಗಳು ಭೂಮಿಯ ವಾರಸುದಾರರು, ಎಲ್ಲರಿಗೂ ಬದುಕುವ ಹಕ್ಕು ಇದೆ. ಮನುಷ್ಯ ನಿಸರ್ಗ ನೀತಿಯನ್ನು ಉಲ್ಲಂಘಿಸುತ್ತಲೇ ಇದ್ದಾನೆ. ಹಿಂಸೆ ಇಲ್ಲಿ ಕಾಣುತ್ತಿದೆ. ಆದರೆ ಆಹಾರ ಸಂಪಾದನೆಯಲ್ಲಿ ಈ ಸಮುದಾಯಗಳು ನಿಸರ್ಗ ಧರ್ಮವನ್ನು ಅನುಸರಿಸುತ್ತಿವೆ. ಇದು ಹಿಂಸೆಯಲ್ಲ. ಅದು ಅವರ ಜೀವನ ಕ್ರಮ. ಇಂತಹ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು. ನಾವು ತಿನ್ನುವ ಆಹಾರವೂ ಜೀವವೇ. ನಾವು ತಿನ್ನುವ ತರಕಾರಿ, ಧಾನ್ಯ, ಸೊಪ್ಪು ಪ್ರಾಣಿ ತಿಂದರೂ ಅದು ನೈಸರ್ಗಿಕ ಧರ್ಮ ಎಂದು ವಿವರಿಸಿದರು.

ಜ್ಞಾನಬುತ್ತಿ ಸತ್ಸಂಗ ಸಂಸ್ಥಾಪಕ ಪಿ.ಶಾಂತಿಲಾಲ್, ಇಂದಿರಮ್ಮ, ಜ್ಞಾನಬುತ್ತಿ ಸತ್ಸಂಗ ಗೌರವಾಧ್ಯಕ್ಷ ಮುರಳಿಕೃಷ್ಣಪ್ಪ, ದ್ವಾರಕನಾಥ್, ಜ್ಞಾನಬುತ್ತಿ ಸತ್ಸಂಗದ ನೂತನ ಅಧ್ಯಕ್ಷರಾಗಿ ಎಂ.ಸಿ.ಲಲಿತ ಮತ್ತು ಕಾರ್ಯದರ್ಶಿಯಾಗಿ ಮಿಮಿಕ್ರಿ ಈಶ್ವರಯ್ಯ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ.ರಮೇಶ್ ಬಾಬು, ಸಾಹಿತಿ ಎನ್. ನಾಗಪ್ಪ, ವಿಮರ್ಶಕ ಎಸ್.ಪಿ.ಪದ್ಮಪ್ರಸಾದ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News