ಮಹಾಮಳೆಗೆ ತತ್ತರಿಸಿದ ಕೊಡಗು: ಹಲವೆಡೆ ಗುಡ್ಡ ಕುಸಿತ, ಆಶ್ರಯ ಕಳೆದುಕೊಂಡ ನೂರಾರು ಗ್ರಾಮಸ್ಥರು
ಮಡಿಕೇರಿ, ಆ.16: ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಮೂವರು ಮಣ್ಣು ಪಾಲಾದ ಘಟನೆ ಮಡಿಕೇರಿ ಸಮೀಪ ಕಾಟಕೇರಿಯಲ್ಲಿ ನಡೆದಿದೆ. ಭೂಕುಸಿತದಿಂದ ಯಶವಂತ್, ವೆಂಕಟರಮಣ ಹಾಗೂ ಪವನ್ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಯತೀಶ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಡ್ಡ ಕುಸಿದ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದಲ್ಲದೆ, ಮತ್ತೆ ಮತ್ತೆ ಗುಡ್ಡ ಕುಸಿಯುತ್ತಲೆ ಇರುವುದರಿಂದ ಮೃತದೇಹಗಳಿರುವ ಪ್ರದೇಶಕ್ಕೆ ತೆರಳಲು ಕೆಸರು ತುಂಬಿದ ಮಾರ್ಗ ಅಡ್ಡಿಯಾಗಿದೆ. ಎರಡು ಮೃತ ದೇಹಗಳನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದ್ದು, ಮತ್ತೊಂದು ಮೃತದೇಹ ಮಣ್ಣಿನ ರಾಶಿಯಡಿ ಸಿಲುಕಿಕೊಂಡಿರುವುದು ಮತ್ತು ಕಾರ್ಯಾಚರಣೆಗೆ ಹೆಚ್ಚಿನ ಸಿಬ್ಬಂದಿಗಳು ತೆರಳಲು ಅಸಾಧ್ಯವಾಗಿರುವುದರಿಂದ ಮೃತದೇಹವನ್ನು ಹೊರತೆಗೆಯಲು ಸಾಧ್ಯವಾಗಿಲ್ಲ.
ಮಡಿಕೇರಿ ನಗರ ಠಾಣಾಧಿಕಾರಿ ಷಣ್ಮುಗ ಅವರು ಸ್ಥಳಕ್ಕೆ ಭೇಟಿ ನೀಡಿದರಾದರು, ಮಾರ್ಗದ ಉದ್ದಕ್ಕೂ ಮೊಣಕಾಲಿನ ವರೆಗೆ ಕೆಸರು ತುಂಬಿರುವುದರಿಂದ ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಮೃತದೇಹಗಳನ್ನು ತರಲು ಕೂಡ ಅಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
ಭಾರೀ ಮಳೆಗೆ ಮಡಿಕೇರಿ ತಾಲೂಕಿನ ಮೂರು ದಿಕ್ಕುಗಳ ಗ್ರಾಮಗಳು ಜಲಾವೃತ ಮತ್ತು ಗುಡ್ಡ ಕುಸಿತದ ಮಣ್ಣಿನಿಂದ ಆವೃತಗೊಂಡಿವೆ. ನೂರಾರು ಗ್ರಾಮಸ್ಥರು ಆಶ್ರಯ ಕಳೆದುಕೊಂಡು ಜೀವ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ಕಾಡು, ನೀರು, ಗುಡ್ಡದ ಮಣ್ಣಿನ ನಡುವೆ ಸಿಲುಕಿಕೊಂಡಿದ್ದಾರೆ. ಮಕ್ಕಂದೂರು ಗ್ರಾಮ ವ್ಯಾಪ್ತಿಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿದ್ದು, ಅರವತ್ತಕ್ಕೂ ಹೆಚ್ಚಿನ ಮಂದಿ ಗ್ರಾಮದ ಬೆಟ್ಟ ಪ್ರದೇಶಗಳಲ್ಲಿ ನೆರವಿಗಾಗಿ ಕಾಯುತ್ತಿದ್ದರೆ, ನೂರಕ್ಕೂ ಹೆಚ್ಚಿನ ಮಂದಿಯನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ.
ತಂತಿಪಾಲ, ಹೆಮ್ಮೆತ್ತಾಳು ವಿಭಾಗದ ಭಾರೀ ಬೆಟ್ಟ ಪ್ರದೇಶಗಳು ಕುಸಿದು ಬಿದ್ದು, ಹಲವಾರು ಮನೆಗಳು ಕುಸಿದು ಸಾಕಷ್ಟು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನೂರಾರು ಮಂದಿ ನೆರವಿಗಾಗಿ ಕಾಯುತ್ತಿದ್ದಾರಾದರು ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ.
ಮಕ್ಕಂದೂರಿನಿಂದ ತಂತಿಪಾಲ, ಹೆಮ್ಮೆತ್ತಾಳು, ಮುಕ್ಕೋಡ್ಲು ವಿಭಾಗಗಳ ಅಲ್ಲಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ತಂತಿಪಾಲದ ಮನೆಯೊಂದು ಬರೆಯ ಮಣ್ಣು ಮತ್ತು ಕೆಸರಿನಿಂದ ಆವೃತ್ತವಾಗಿದ್ದು, ಮನೆಯಲ್ಲಿರುವ ನಿವಾಸಿಗಳು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರಾದರೂ ಅವರ ರಕ್ಷಣೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಟ್ಟ ಪ್ರದೇಶಗಳಲ್ಲಿ ರಕ್ಷಣೆ ಪಡೆದ ಹಲವು ಮಂದಿ ತಮ್ಮ ಪರಿಚಯದವರ ಮೊಬೈಲ್‍ಗಳಿಗೆ ಕರೆ ಮಾಡಿ ರಕ್ಷಣೆಗೆ ಯಾಚಿಸುತ್ತಿದ್ದಾರೆ. ಪ್ರಸ್ತುತ ಅವರೊಂದಿಗೆ ಮರಳಿ ಸಂಪರ್ಕವೂ ಸಾಧ್ಯವಾಗದೆ, ಅವರು ಸಿಲುಕಿಕೊಂಡಿರುವ ಪ್ರದೇಶವನ್ನು ಗುರುತಿಸುವುದು ದುಸ್ತರವಾಗಿ ಪರಿಣಮಿಸಿದೆ.
ಹೆಲಿಕಾಪ್ಟರ್ ಬರಲು ಸಾಧ್ಯವಾಗುತ್ತಿಲ್ಲ
ಗುಡ್ಡ ಕುಸಿತ, ಪ್ರವಾಹದಿಂದ ನಲುಗಿರುವ ಮಕ್ಕಂದೂರು, ತಂತಿಪಾಲ, ಹೆಮ್ಮೆತ್ತಾಳು ನಿವಾಸಿಗಳ ರಕ್ಷಣಾ ಕಾರ್ಯಕ್ಕೆ ಅಗತ್ಯ ನೆರವನ್ನು ನೀಡಲು ಜಿಲ್ಲಾಡಳಿತ ಸರ್ಕಾರದ ಮೊರೆ ಹೋದ ಹಿನ್ನೆಲೆಯಲ್ಲಿ, ಮಂಗಳೂರಿನಿಂದ ಸೇನಾ ಹೆಲಿಕಾಪ್ಟರ್ ಅನ್ನು ನಿರೀಕ್ಷಿಸಲಾಗುತ್ತಿದೆಯಾದರು, ಹವಾಮಾನ ವೈಪರೀತ್ಯದಿಂದಾಗಿ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಮಕ್ಕಂದೂರಿನಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಲ್ಲಿ ಸಿಲುಕಿಕೊಂಡವರ ರಕ್ಷಣೆಗಾಗಿ ಮಡಿಕೇರಿ ಮತ್ತು ಸೋಮವಾರಪೇಟೆ ವಿಭಾಗದ 100 ಕ್ಕೂ ಹೆಚ್ಚಿನ ಆರೆಸ್ಸೆಸ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ನೆರವನ್ನು ಒದಗಿಸಿ, ಗ್ರಾಮಸ್ಥರನ್ನು ಮಡಿಕೇರಿಗೆ ಸ್ಥಳಾಂತರಿಸಲು ನೆರವನ್ನು ನೀಡಿದ್ದಾರೆ.
ಮಕ್ಕಂದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಸಂಭವಿಸುತ್ತಿರುವ ಅಪಾರ ಹಾನಿಯಿಂದ ಕಂಗೆಟ್ಟಿರುವ ಅಲ್ಲಿನ ನೂರೈವತ್ತಕ್ಕೂ ಹೆಚ್ಚಿನ ಮಂದಿಯನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದ್ದು, ನಗರದ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಗಂಜಿ ಕೇಂದ್ರ್ರವನ್ನು ತೆರೆಯಲಾಗಿದೆ.
ಮಗನನ್ನು ಉಳಿಸಿ ಕೊಡಿ
ಮಡಿಕೇರಿಯ ಗಂಜಿ ಕೇಂದ್ರಕ್ಕೆ ಆಗಮಿಸಿದ ಸರಸ್ವತಿ ಎಂಬವರು, ‘ನನ್ನ ಮಗ ಮುಕ್ಕೋಡ್ಲುವಿನ ಪೇರಿಯಂಡ ಹೋಂ ಸ್ಟೇಯಲ್ಲಿ ಸಿಲುಕಿಕೊಂಡಿದ್ದು, ಈತನೊಂದಿಗೆ 15 ಮಂದಿ ಇದ್ದಾರೆ. ದಯವಿಟ್ಟು ನನ್ನ ಮಗನನ್ನು ರಕ್ಷಿಸಿ’ ಎಂದು ಕಣ್ಣೀರಿಡುತ್ತಿದ್ದ ಘಟನೆ ನಡೆಯಿತು.
ಮಕ್ಕಂದೂರಿನ ಬೋರ್‍ವೆಲ್ ಪೈಸಾರಿಯ ಈಶ್ವರ ಎಂಬವರು ಮಾತನಾಡಿ, ನಮ್ಮ ಪೈಸಾರಿಯಲ್ಲಿ 21 ಕುಟುಂಬಗಳಿದ್ದು, ಸಾಕಷ್ಟು ಮನೆಗಳು ಬರೆಕುಸಿತದಿಂದ ಹಾನಿಗೊಳಗಾಗಿದೆ. ಬಹಳಷ್ಟು ಕುಟುಂಬಗಳು ಮಡಿಕೇರಿಗೆ ಸ್ಥಳಾಂತರವಾಗಿವೆ. ಮತ್ತಷ್ಟು ಕುಟುಂಬಗಳು ಅಲ್ಲೇ ಅಪಾಯದ ಪರಿಸ್ಥಿತಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಹೆಮ್ಮೆತ್ತಾಳು ಗ್ರಾಮದ ಕುಮಾರ್ ಅವರು, ನಾವು ವಾಸವಿರುವೆಡೆ 22 ಕುಟುಂಬಗಳಿದ್ದು, ಬರೆಕುಸಿತ ನಿರಂತರವಾಗಿ ಮುಂದುವರಿದಿರುವುದಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಕುಸಿದ ಮನೆಗಳು
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮುಂಗಾರು ಮಳೆಯ ಆರ್ಭಟಕ್ಕೆ ಅನಾಹುತಗಳ ಸರಣಿ ಮುಂದುವರಿದಿದ್ದು, ಬುಧವಾರ ರಾತ್ರಿಯ ಬಿರುಮಳೆಗೆ ಮನೆಯೊಂದು ಯಥಾ ಸ್ಥಿತಿಯಲ್ಲಿ ಕಂದಕಕ್ಕೆ ಕುಸಿದು ನಿಂತಿದ್ದರೆ, ಬೆಟ್ಟ ಪ್ರದೇಶದ ಬಡಾವಣೆಗಳ ನಿವಾಸಿಗಳು ಆತಂಕಕ್ಕೆ ಸಿಲುಕಿದ್ದು ಹಲವು ಕುಟುಂಬಗಳು ಮನೆ ತೊರೆದು ಸ್ಥಳಾಂತರಗೊಂಡಿವೆ.
ನಗರದ ಮುತ್ತಪ್ಪ ದೇವಾಲಯದ ಬಳಿ ರಫೀಕ್ ಎಂಬವರಿಗೆ ಸೇರಿದ ಒಂದು ಅಂತಸ್ತಿನ ಮನೆ ಗುರುವಾರ ಬೆಳಗ್ಗೆ ಅಡಿಪಾಯ ಸಹಿತ ನೂರು ಅಡಿ ಆಳದ ಕಂದಕಕ್ಕೆ ಜಾರಿಹೋಗಿದ್ದು, ಅದರ ಪಕ್ಕದಲ್ಲೆ ಇದ್ದ ಹನೀಫ್ ಎಂಬವರ ಮನೆಯು ಬೀಳುವ ಸ್ಥಿತಿಯಲ್ಲಿದೆ. ರಫೀಕ್ ಅವರ ಮನೆಯಲ್ಲಿ ಇದ್ದವರು, ಅಪಾಯದ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯೇ ಮನೆ ಖಾಲಿ ಮಾಡಿದ್ದರಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರಗಳಲ್ಲಿ ಭಾರೀ ಅನಾಹುತದ ಪರಿಸ್ಥಿತಿ ತಲೆ ದೋರಿದ್ದು, ರಭಸವಾಗಿ ಹರಿಯುತ್ತಿರುವ ಮಳೆ ನೀರಿನಲ್ಲಿ ಗುಡ್ಡ ಸಹಿತ 8 ಕ್ಕೂ ಹೆಚ್ಚಿನ ಮನೆಗಳು ಆಳ ಪ್ರಪಾತಕ್ಕೆ ಕುಸಿದು ಹೋಗಿವೆ. ಇದರಿಂದ ಇವುಗಳ ಪಕ್ಕದ ಮನೆಗಳು ಅಪಾಯಕ್ಕೆ ಸಿಲುಕಿದ್ದು, ಹಲವಾರು ಕುಟುಂಬಗಳು ಮನೆ ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿವೆ. ಬಡಾವಣೆಯ ಅಂಗನವಾಡಿಯಲ್ಲಿ ಗಂಜಿ ಕೇಂದ್ರ್ರವನ್ನು ತೆರೆಯಲಾಗಿದ್ದು, 9 ಮಂದಿ ಅದರಲ್ಲಿ ರಕ್ಷಣೆ ಪಡೆದಿದ್ದಾರೆ.
ನಗರದ ಇತರ ಕಡೆಗಳಲ್ಲೂ ಗುಡ್ಡ ಕುಸಿತದಿಂದ ಮನೆಗಳಿಗೆ ಹಾನಿಯಾಗಿರುವ ಘಟನೆಗಳು ನಡೆದಿವೆ. ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಇತರ ಸಂಘ ಸಂಸ್ಥೆಗಳು ನೆರವಿನ ಹಸ್ತವನ್ನು ಚಾಚಿದ್ದು, ಅಗತ್ಯ ವಾಸ್ತವ್ಯ, ಆಹಾರದ ವ್ಯವಸ್ಥೆಗಳನ್ನು ಮಾಡುತ್ತಿವೆ.