×
Ad

ಗುಂಡ್ಲುಪೇಟೆ: ಬಸ್ಸುಗಳ ಮುಖಾಮುಖಿ ಢಿಕ್ಕಿ; 31 ಮಂದಿಗೆ ಗಾಯ

Update: 2018-08-16 17:31 IST

ಗುಂಡ್ಲುಪೇಟೆ,ಆ.16: ತಾಲೂಕಿನ ಕಗ್ಗಳ ಗ್ರಾಮದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸುತ್ತಿದ್ದ ಬಸ್ಸಿಗೆ ಎದುರಿನಿಂದ ಬಂದ ಸಾರಿಗೆ ಸಂಸ್ಥೆಯ ಬಸ್ಸು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಚಾಲಕರು ಸೇರಿದಂತೆ 31 ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ.

ಚಾಮರಾಜನಗರದಿಂದ ಪಟ್ಟಣಕ್ಕೆ ಬರುತ್ತಿದ್ದ ಬಸ್ಸು ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ಪಟ್ಟಣದಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಬಸ್ಸು ಢಿಕ್ಕಿ ಹೊಡೆದಿದೆ. ಚಾಲನೆ ಸಂದರ್ಭದಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ಚಾಲಕ ಎದುರಿಗೆ ಬಂದ ವೃದ್ದೆಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಲಕ್ಕೆ ಚಲಿಸಿದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಎರಡೂ ಬಸ್ಸುಗಳ ಚಾಲಕರಾದ ಶಿವರಾಜು, ರವಿಕುಮಾರ್ ಹಾಗೂ 29 ಪ್ರಯಾಣಿಕರಿಗೆ ಗಾಯಗಳಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತೆರಕಣಾಂಬಿ ಠಾಣೆಯ ಪೊಲೀಸರು ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ತೀವ್ರ ಗಾಯಗಳಾದ ಮೂವರು ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆಸ್ಪತ್ರೆಗೆ ಹೆಚ್ಚುವರಿ ಎಸ್ ಪಿ ಗೀತಾಪ್ರಸನ್ನ, ಸರ್ಕಲ್ ಇನ್ಸ್ ಪೆಕ್ಟರ್ ಎಚ್.ಎನ್.ಬಾಲಕೃಷ್ಣ, ಪಟ್ಟಣದ ಸಾರಿಗೆ ಘಟಕದ ಮ್ಯಾನೇಜರ್ ಎಂ.ಜಿ ಜಯಕುಮಾರ್ ಭೇಟಿ ನೀಡಿ ಗಾಯಾಳುಗಳಿಂದ ಘಟನೆಯ ವಿವರ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News