ಕಲಬುರ್ಗಿ: ಮನೆ ಕುಸಿದು ಮೂವರು ಸ್ಥಳದಲ್ಲೇ ಮೃತ್ಯು
Update: 2018-08-16 19:29 IST
ಕಲಬುರ್ಗಿ,ಆ.16: ಮನೆಯೊಂದು ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಬಾಯಿ, ಈಕೆಯ ಮಕ್ಕಳಾದ ಯಲ್ಲಮ್ಮ ಹಾಗೂ ಅಂಬಿಕಾ ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಧಾರಾಕಾರ ಮಳೆ ಸುರಿಯುತಿತ್ತು, ಮಣ್ಣಿನ ಮನೆಯಾಗಿದ್ದರಿಂದ ಮಳೆಗೆ ಕುಸಿದಿದ್ದು, ಪರಿಣಾಮ ಮನೆಯಲ್ಲಿ ಮಲಗಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.