ವಾಜಪೇಯಿ ಬಗ್ಗೆ ರಾಜ್ಯ ರಾಜಕೀಯ ನಾಯಕರ ಮಾತುಗಳು

Update: 2018-08-16 16:33 GMT

ಬೆಂಗಳೂರು, ಆ. 16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ತನ್ನ ಶತ್ರುಗಳನ್ನೂ ಕಟು ಶಬ್ದಗಳಿಂದ ಟೀಕಿಸಿರಲಿಲ್ಲ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ವಾಜಪೇಯಿ ಅವರ ಅಗಲಿಕೆ ದೇಶದಲ್ಲಿ ದೊಡ್ಡ ಶೂನ್ಯವನ್ನುಂಟು ಮಾಡಿದೆ. ವಿದೇಶಾಂಗ ಮಂತ್ರಿ, ಪ್ರಧಾನಿಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು ಶ್ರೇಷ್ಠ ನಾಯಕ, ಉತ್ತಮ ಸಂಸದೀಯ ಪಟು. ಅಜಾತ ಶತ್ರು ಎಂದು ದೇವೇಗೌಡ ಸ್ಮರಿಸಿದ್ದಾರೆ.

ನನ್ನ ಅವಧಿಯಲ್ಲಿ ಯುದ್ಧ ಸಾಮಗ್ರಿ ಕೊಳ್ಳುವ ಕಾಲದಲ್ಲಿ ನಮ್ಮ ಸರಕಾರ ಯಾವುದೇ ಅಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ಅವರೇ ಹೇಳಿದ್ದರು. ಪಾಕಿಸ್ತಾನಕ್ಕೆ ಬಸ್ ಯಾತ್ರೆ ಮಾಡಿ ಪಕ್ಕದ ದೇಶದ ಜತೆ ಸೌಹಾರ್ದಯುತ ಸಂಬಂಧ ಹೊಂದಲು ಯತ್ನಿಸಿದರು. ಆದರೆ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ಸಾಮರ್ಥ್ಯವೇನು ಎಂಬುದನ್ನು ತೋರಿಸಿದರು ಎಂದು ದೇವೇಗೌಡ ನೆನಪು ಮಾಡಿಕೊಂಡಿದ್ದಾರೆ.

ಗುಜರಾತಿನ ಗೋದ್ರಾ ಪ್ರಕರಣದಲ್ಲಿ ತಮ್ಮ ಪಕ್ಷದ ಮುಖ್ಯಮಂತ್ರಿಗೆ ರಾಜಧರ್ಮ ಪಾಲನೆ ಆಗಿಲ್ಲ ಎಂದು ಹೇಳಿದ್ದರು. ಯಾರ ಮನಸ್ಸಿಗೂ ನೋವಾಗಬಾರದು ಎಂಬ ಮನೋಭಾವ ಹೊಂದಿದ್ದ ಒಬ್ಬ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ ಎಂದು ದೇವೇಗೌಡ ಕಂಬನಿ ಮಿಡಿದಿದ್ದಾರೆ.

ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ: ಮುಖ್ಯಮಂತ್ರಿ ಕುಮಾರಸ್ವಾಮಿ

ಆಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅಜಾತ ಶತ್ರು, ಅವರ ನಿಧನದಿಂದ ಅತೀವ ದುಃಖವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಸೋಲನ್ನೆಂದೂ ಒಪ್ಪಲಾರೆ, ಹೊಸ ಸವಾಲುಗಳಿಗೆಂದೂ ಹೆದರಲಾರೆ’ ಎನ್ನುವ ಅವರ ಕವನದ ಸಾಲೊಂದು ವಾಜಪೇಯಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ವಾಜಪೇಯಿ ಅವರು ಭ್ರಾತೃತ್ವ ಮತ್ತು ಸಹಬಾಳ್ವೆಯಲ್ಲಿ ಅಪರಿಮಿತ ನಂಬಿಕೆ ಇಟ್ಟವರು. ಅವರೊಬ್ಬ ಅತ್ಯುತ್ತಮ ವಾಗ್ಮಿ ಮತ್ತು ಆದರ್ಶ ಸಂಸದೀಯ ಪಟುವಾಗಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಗೆ ಅವರ ಮಾಡಿದ ಪ್ರಯತ್ನಗಳು ಶ್ಲಾಘನೀಯ. ವೈಯಕ್ತಿಕವಾಗಿ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಸೌಜನ್ಯ ನಮಗೆಲ್ಲರಿಗೂ ಆದರ್ಶ. ಅವರ ನಿಧನದಿಂದ ದೇಶ ಒಬ್ಬ ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ.

ದೂರದೃಷ್ಟಿ ನಾಯಕ: ಬಿ.ಎಸ್.ಯಡಿಯೂರಪ್ಪ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ದೇಶದ ಅತ್ಯುತ್ತಮ ಕವಿ, ಬರಹಗಾರ, ಮುತ್ಸದ್ದಿ, ಸಹೃದಯಿ ರಾಜಕಾರಣಿಯನ್ನು ಕಳೆದುಕೊಂಡು ದೇಶ ಅನಾಥವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.

ಅವರ ಅಗಲಿಕೆ ದೇಶಕ್ಕೆ, ಜನತೆಗೆ ಅದರಲ್ಲೂ ಬಿಜೆಪಿ ಕುಟುಂಬಕ್ಕೆ ದೊಡ್ಡ ಹಾನಿ. ನನ್ನಂತವರಿಗೆ ಅವರೊಂದಿಗೆ ಕೆಲಸ ಮಾಡಿದ್ದೇ ಪುಣ್ಯ ಮತ್ತು ದೊಡ್ಡ ಅನುಭವ. ಅವರ ರಾಜಕೀಯ ನಡೆ-ನುಡಿ ಎಲ್ಲರಿಗೂ ಅನುಕರಣೀಯ. ‘ಅಂಧೇರಾ ಚಟೇಗಾ, ಸೂರಜ್ ನಿಕ್ಲೇಗಾ, ಕಮಲ್ ಕಿಲೇಗಾ’ (ಕತ್ತಲೆ ದೂರವಾಗುತ್ತದೆ, ಸೂರ್ಯ ಉದಯಿಸುತ್ತಾನೆ, ಕಮಲ ಅರಳುತ್ತದೆ) ಎಂಬುದು ಇಂದಿಗೂ ಅವರ ದೂರದೃಷ್ಟಿತನ ಎತ್ತಿತೋರಿಸುತ್ತದೆ ಎಂದು ಬಣ್ಣಿಸಿದ್ದಾರೆ.

ವಾಜಪೇಯಿ ಆದರ್ಶ ಎಲ್ಲರಿಗೂ ಮಾದರಿ: ಡಿಸಿಎಂ ಡಾ.ಜಿ.ಪರಮೇಶ್ವರ್

ಮಾಜಿ ಪ್ರಧಾನಿಗಳು, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಹಲೋಕ ತ್ಯಜಿಸಿದ್ದು ನೋವುಂಟು ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ. ಒಂದು ವಾರದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಳಗ್ಗೆಯಿಂದ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಹಳ ದುಃಖವಾಗಿತ್ತು. ಅವರ ಆರೋಗ್ಯ ಸುಧಾರಿಸಲಿ ಎಂದು ಕೇಳಿಕೊಂಡಿದ್ದೆವು. ಆದರೆ ಫಲಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಪೋಖ್ರಾನ್‌ನಲ್ಲಿ ಅಣುಶಕ್ತಿ ಪರೀಕ್ಷಿಸುವ ದಿಟ್ಟತನ ತೋರಿದ್ದ ಅವರು, ಮೆಚ್ಚುಗೆ ಪಡೆದುಕೊಂಡಿದ್ದರು. ಅಣುಶಕ್ತಿ ಸಾಲಿನಲ್ಲಿ ಭಾರತವೂ ಸೇರಿದೆ ಎಂಬುದನ್ನು ಸಾಬೀತು ಮಾಡಿದ್ದರು. ನೆರೆ ರಾಷ್ಟ್ರದೊಂದಿಗೆ ಸ್ನೇಹ ಸೌಹಾರ್ದ ಬೆಳೆಸಬೇಕೆಂದು ಹೊರಟವರು. ಅವರ ಆದರ್ಶ ಎಲ್ಲರಿಗೂ ಮಾದರಿ ಎಂದು ಸ್ಮರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News