6 ಕೋಟಿ ಜನರ ಹಸಿವು ನೀಗಿಸಿದ ಇಂದಿರಾ ಕ್ಯಾಂಟೀನ್‌ಗೆ ಒಂದು ವರ್ಷ

Update: 2018-08-16 15:06 GMT

ಬೆಂಗಳೂರು, ಆ.16: ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂಬ ಉದ್ದೇಶದಿಂದ, ಬಡವರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ವಿತರಿಸುವ ನಿಟ್ಟಿನಲ್ಲಿ ಹಿಂದಿನ ಸಿದ್ದರಾಮಯ್ಯ ಸರಕಾರ ಜಾರಿ ಮಾಡಿದ್ದ ‘ಇಂದಿರಾ ಕ್ಯಾಂಟೀನ್’ ಇದೇ ಆ.15 ಕ್ಕೆ ಒಂದು ವರ್ಷವನ್ನು ಪೂರೈಸಿದೆ.

ಈ ಕ್ಯಾಂಟೀನ್ ಹಲವಾರು ಏಳುಬೀಳುಗಳ ನಡುವೆ ವರ್ಷಾಚರಣೆ ಆಚರಿಸಿಕೊಂಡಿದೆ. ಒಂದಿಷ್ಟು ಕಡೆ ಕಟ್ಟಡ ನಿರ್ಮಾಣ ಸಾಧ್ಯವಾಗದಿರುವುದು, ಕಾನೂನು ಹೋರಾಟ, ಅಪಪ್ರಚಾರ, ವಿರೋಧ, ಅಪಾರ ಬೆಂಬಲದ ಜತೆಗೆ ಇಂದಿರಾ ಕ್ಯಾಂಟೀನ್ ಯಶಸ್ವಿಯಾಗಿ ಸಾಗಿದ್ದು, ತಮ್ಮ ಜನಪ್ರಿಯತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.

10 ರೂ.ಗೆ ಊಟ, 5 ರೂ.ಗೆ ತಿಂಡಿ ನೀಡುವ ಮೂಲಕ ಬಡವರು, ಅಸಹಾಯಕರ ಹೊಟ್ಟೆ ತುಂಬಿಸಿ ಹಸಿವು ಮುಕ್ತ ಮಾಡುವ ನಿಟ್ಟಿನಲ್ಲಿ ಹಿಂದಿನ ಸರಕಾರ ತನ್ನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿತ್ತು. ಹಿಂದಿನ ವರ್ಷ ಆ.15 ರಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಜಯನಗರದ ಕನಕನಪಾಳ್ಯದ ಅಶೋಕ ಪಿಲ್ಲರ್ ಸಮೀಪವಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಅನಂತರ ನಗರದ ವಿವಿಧ ಕಡೆಗಳಲ್ಲಿನ ಕ್ಯಾಂಟೀನ್‌ಗಳಲ್ಲಿ 6 ಕೋಟಿ ಜನ ಆಹಾರ ಸೇವನೆ ಮಾಡಿದ್ದಾರೆ.

ನಗರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ವಾರ್ಡ್‌ಗೆ ಒಂದರಂತೆ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲು ಸರಕಾರ ಮುಂದಾಗಿತ್ತು. ಬಿಬಿಎಂಪಿ ಅದರ ನೇತೃತ್ವ ವಹಿಸಿಕೊಂಡಿತ್ತು. ಆದರೆ, ಎಲ್ಲ ಕಡೆ ಕ್ಯಾಂಟೀನ್ ನಿರ್ಮಿಸಲು ಸಾಕಷ್ಟು ತೊಡಕುಗಳನ್ನು ಎದುರಿಸಬೇಕಾಯಿತು. ಕೆಲವು ಕಡೆಗಳಲ್ಲಿ ಜನರ ಕೊರತೆಯಾದರೆ, ಮತ್ತೊಂದು ಕಡೆ ಸ್ಥಳದ ಕೊರತೆ ಹಾಗೂ ಕಾನೂನು ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇಷ್ಟೆಲ್ಲಾ ಸಮಸ್ಯೆಗಳು, ಗೊಂದಲಗಳ ನಡುವೆಯೂ ನಗರದಲ್ಲಿ 171 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾಚರಣೆ ಮಾಡುತ್ತಿದೆ. ಅಲ್ಲದೆ, ಎಲ್ಲ ಕಡೆಗಳಲ್ಲಿ ಕ್ಯಾಂಟೀನ್ ನಿರ್ಮಾಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಪಾಲಿಕೆಯು 17 ಸಂಚಾರಿ ಕ್ಯಾಂಟೀನ್‌ಗಳನ್ನು ಆರಂಭಿಸಿದೆ.

6 ಕೋಟಿ ಜನ ಆಹಾರ ಸೇವನೆ: ಕಳೆದ ಒಂದು ವರ್ಷದ ಅವಧಿಯಲ್ಲಿ ನಗರದ ವಿವಿಧ ಕಡೆಗಳಲ್ಲಿರುವ ಇಂದಿರಾ ಕ್ಯಾಂಟೀನ್ ಮೂಲಕ ಆರು ಕೋಟಿಗೂ ಅಧಿಕ ಮಂದಿ ಆಹಾರ ಸೇವನೆ ಮಾಡಿದ್ದಾರೆ. ಪ್ರತಿದಿನ ಅಂದಾಜು 2 ಲಕ್ಷಕ್ಕೂ ಅಧಿಕ ಜನರು ಆಹಾರ ಸೇವಿಸಿದ್ದಾರೆ. ಒಂದು ಕ್ಯಾಂಟೀನ್‌ಗೆ ನಿತ್ಯ 1200 ಮಂದಿ ಭೇಟಿ ಕೊಡುತ್ತಿದ್ದಾರೆ. ಈಗಾಗಲೇ ನಗರದಲ್ಲಿ 20 ಕೇಂದ್ರೀಕೃತ ಅಡುಗೆ ಕೋಣೆಗಳನ್ನು ನಿರ್ಮಿಸಲಾಗಿದ್ದು, ಇಲ್ಲಿಂದಲೇ ಆಹಾರ ಪೂರೈಸಲಾಗುತ್ತಿದೆ.

ಅತ್ಯಂತ ಯಶಸ್ವಿ: ಯಾವುದೇ ಸಿದ್ಧತೆ ಇಲ್ಲದೇ, ಅನುಭವ ಇಲ್ಲದೇ ಇಂದಿರಾ ಕ್ಯಾಂಟೀನ್ ಆರಂಭಿಸಿದೆವು. ಆದರೆ, ಇದು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಕೆಲವೆಡೆ ನಮಗೆ ಕ್ಯಾಂಟೀನ್ ನಿರ್ಮಾಣಕ್ಕೆ ಅವಕಾಶ ಸಿಗದೇ ಇರಬಹುದು. ಆದರೂ, ನಿರ್ಮಿಸಿದ ಕಡೆ ನಿಜವಾದ ಆಶಯ ಈಡೇರಿಸುವಲ್ಲಿ ಕ್ಯಾಂಟೀನ್ ಸಫಲವಾಗಿದೆ. ಒಂದು ವರ್ಷದಲ್ಲಿ ದೇಶಮಟ್ಟದಲ್ಲಿ ನಮ್ಮ ಸೇವೆ ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾದ ಯೋಜನೆ ರಾಜ್ಯಾದ್ಯಂತ ವಿಸ್ತರಣೆಯಾಗಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಮೂಲೆಗಳಲ್ಲಿ ಕೋಟ್ಯಂತರ ಜನರ ಹಸಿವು ನೀಗಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆಶಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News