ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ

Update: 2018-08-16 16:52 GMT

ಬೆಂಗಳೂರು, ಆ. 16: ಕರ್ನಾಟಕದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಈ ಮೊದಲು ನಿಗದಿಯಾಗಿದ್ದ ಚುನಾವಣಾ ದಿನವನ್ನು ಎರಡು ದಿನ ಮುಂದೂಡಿ, ಆ.31ಕ್ಕೆ ಮತದಾನ, ಸೆ.3ಕ್ಕೆ ಫಲಿತಾಂಶ ಹೊರಬೀಳಲಿದೆ ಎಂದು ಬದಲಾದ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆ.16ರಂದು ನಿಧನರಾಗಿರುವುದರಿಂದ ಸರಕಾರವು ಆ.17ರಂದು ಸಾರ್ವಜನಿಕ ರಜೆಯನ್ನು ಘೋಷಿಸಿದೆ. ಮೇಲ್ಕಂಡ ಸನ್ನಿವೇಶದ ಹಿನ್ನೆಲೆಯಲ್ಲಿ ಆಯೋಗವು ತಿದ್ದುಪಡಿ ಆದೇಶದಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಅದು ಈ ಕೆಳಕಂಡಂತಿದೆ.

ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 18.8.2018(ಶನಿವಾರ) ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ: 20.8.2018(ಸೋಮವಾರ), ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ: 23.8.2018(ಗುರುವಾರ), ಮತದಾನ ನಡೆಸಬೇಕಾದ ದಿನಾಂಕ: 31.8.2018(ಶುಕ್ರವಾರ), ಮರುಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನಾಂಕ: 2.9.2018(ಭಾನುವಾರ), ಮತಗಳ ಎಣಿಕೆಯ ದಿನಾಂಕ: 3.9.2018(ಸೋಮವಾರ).

ಮೇಲ್ಕಂಡ ಚುನಾವಣಾ ವೇಳಾಪಟ್ಟಿಯಂತೆ ದಿನಾಂಕ 29.8.2018(ಬುಧವಾರ)ರಂದು ನಿಗದಿಯಾಗಿದ್ದ ಮತದಾನವು ದಿನಾಂಕ 31.8.2018(ಶುಕ್ರವಾರ) ನಡೆಯಲಿದೆ.

ದಿನಾಂಕ 9.8.2018 ರಂದು ಮೂರು(ಶಿವಮೊಗ್ಗ, ಮೈಸೂರು ಹಾಗೂ ತುಮಕೂರು) ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಹೊರಡಿಸಲಾದ ಚುನಾವಣಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಅರ್ಚನ ಎಂ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News