ಮಲೆನಾಡಿನಲ್ಲಿ ಮುಂದುವರೆದ ವರ್ಷಧಾರೆ: ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆ

Update: 2018-08-16 17:03 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಆ. 16: ಮಲೆನಾಡಿನಲ್ಲಿ ವರ್ಷಧಾರೆ ಮುಂದುವರೆದಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದ ನದಿಗಳು ತುಂಬಿ ಹರಿಯುತ್ತಿವೆ. ಹಲವೆಡೆ ಪ್ರವಾಹ ಸ್ಥಿತಿ ಮುಂದುವರಿದಿದೆ. ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆ ಉಂಟಾಗಿದೆ. 

ಲಿಂಗನಮಕ್ಕಿ ಡ್ಯಾಂನಲ್ಲಿ ಬಂದ್ ಮಾಡಲಾಗಿದ್ದ ರೇಡಿಯಲ್ ಗೇಟ್‍ಗಳನ್ನು ಮತ್ತೆ ತೆರೆದು, ನೀರು ಹೊರ ಬಿಡಲಾಗುತ್ತಿದೆ. ಭದ್ರಾ ಡ್ಯಾಂ ಬಳಿ ತಡೆಗೋಡೆ ಕುಸಿದು ಬಿದ್ದಿದೆ. ಬಾಳೆಬರೆ ಘಾಟಿ ಸಮೀಪದ ಚಂಡಿಕಾ ದೇವಾಲಯ ಹಿಂಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಜಿಲ್ಲೆಯ ಹಲವೆಡೆ ರಸ್ತೆ ಕುಸಿತವಾಗಿದೆ. ತಗ್ಗು ಪ್ರದೇಶದ ಮನೆ, ಕೃಷಿ, ತೋಟದ ಜಮೀನುಗಳಿಗೆ ನೀರು ನುಗ್ಗಿದೆ. 

ಮಳೆ ವಿವರ: ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿ ಪ್ರಮಾಣ, 32.94 ಮಿ.ಮೀ.ಯಾಗಿದೆ. 

ಲಿಂಗನಮಕ್ಕಿ ಡ್ಯಾಂನ ಒಳಹರಿವು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಬುಧವಾರ ಡ್ಯಾಂನಿಂದ ಹೊರಬಿಡಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಗುರುವಾರ ಡ್ಯಾಂನ ಒಳಹರಿವಿನಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದೆ. ಲಭ್ಯ ಮಾಹಿತಿ ಅನುಸಾರ ಡ್ಯಾಂನ ಒಳಹರಿವು ಸುಮಾರು 60 ಸಾವಿರ ಕ್ಯೂಸೆಕ್‍ಗೆ ಏರಿಕೆಯಾಗಿದೆ. ಈ ಕಾರಣದಿಂದ 11 ರಲ್ಲಿ 7 ರೇಡಿಯಲ್ ಗೇಟ್‍ಗಳನ್ನು ತೆರೆದು ಸುಮಾರು 18 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಡ್ಯಾಂ ವ್ಯಾಪ್ತಿಯ ಇಂಜಿನಿಯರ್ ಗಳು ಮಾಹಿತಿ ನೀಡುತ್ತಾರೆ. 

ಪ್ರಸ್ತುತ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1817.30 (ಗರಿಷ್ಠ ಮಟ್ಟ : 1819) ಅಡಿಯಿದೆ. ಉಳಿದಂತೆ ಭದ್ರಾ ಡ್ಯಾಂನ ಒಳಹರಿವು 44,670 ಕ್ಯೂಸೆಕ್ ಇದ್ದು, 47,645 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಾ ಡ್ಯಾಂನ ಒಳಹರಿವು 51,534 ಕ್ಯೂಸೆಕ್ ಇದ್ದು, 50,193 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 

ಕುಸಿತ: ಭದ್ರಾ ಜಲಾಶಯದ ಬಳಿ ತಡೆಗೋಡೆ ಕುಸಿದು ಬಿದ್ದಿದೆ. ಡ್ಯಾಂನಿಂದ ಸುಮಾರು 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕುಸಿತದ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಸಾರ್ವಜನಿಕರ ಓಡಾಟದ ಮೇಲೆ ನಿರ್ಬಂಧ ವಿಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News