ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

Update: 2018-08-16 17:11 GMT

ಚಿಕ್ಕಮಗಳೂರು, ಆ.16: ಅತಿವೃಷ್ಟಿಗೆ ಜಿಲ್ಲೆಯ ಮಲೆನಾಡಿನ ತಾಲೂಕುಗಳ ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ಹಗಲಿನ ವೇಳೆ ಕೊಂಚ ಕಡಿಮೆಯಾಗಿದ್ದ ವರುಣಾರ್ಭಟ ಕತ್ತಲಾಗುತ್ತಿದ್ದಂತೆ ಬಿರುಸುಗೊಂಡಿದೆ. ಪರಿಣಾಮ ಮಲೆನಾಡಿನ ತುಂಗಾ, ಭದ್ರಾ, ಹೇಮಾವತಿ ನದಿಗಳು ಗುರುವಾರ ಬೆಳಗ್ಗೆಯಿಂದಲೇ ತುಂಬಿ ಹರಿಯಲಾರಂಭಿಸಿದ್ದವು. ಭದ್ರಾನದಿಗೆ ಅಡ್ಡಲಾಗಿ ಕಟ್ಟಿರುವ ಹೆಬ್ಬಾಳೆ ಸೇತುವೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 16 ಬಾರಿ ಮುಳುಗಡೆಯಾಗಿ ದಾಖಲೆ ಬರೆದಂತಾಗಿದೆ.

ಕಳೆದ 6 ದಿನಗಳಿಂದ ನಿರಂತರವಾಗಿ ಸುರಿದು ಮಲೆನಾಡಿಗರ ನಿದ್ದೆಗೆಡಿಸಿದ್ದ ಮಳೆ ಬುಧವಾರ ಬೆಳಗ್ಗೆಯಿಂದಲೇ ಕೊಂಚ ಬಿಡುವು ನೀಡಿದ್ದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದರು. ಆದರೆ ರಾತ್ರಿಯಾಗುತ್ತಲೇ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದೆ. ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಮಲೆನಾಡಿನಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ದೃಶ್ಯಗಳು ಗುರುವಾರ ಬೆಳಗ್ಗೆ ಕಂಡುಬಂದವು. 

ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರ, ಮೂಡಿಗೆರೆ, ಗಬ್ಗಲ್, ಜಾವಳಿ, ಕಳಸ, ಕುದುರೆಮುಖ, ಜಾಂಬಳೆ ಮತ್ತಿತರ ಕಡೆಗಳಲ್ಲಿ ಬುಧವಾರ ರಾತ್ರಿ ಧಾರಕಾರ ಮಳೆಯಾಗಿದ್ದು, ಗುರುವಾರ ಹಗಲಿಡೀ ಮಳೆ ಸುರಿದಿದೆ. ನಿರಂತರ ಮಳೆಯಿಂದಾಗಿ ಭದ್ರಾನದಿ ತುಂಬಿ ಹರಿದು ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ 16ನೇ ಬಾರಿಗೆ ಮುಳುಗಡೆಯಾಗಿದ್ದ ದೃಶ್ಯ ಗುರುವಾರ ಬೆಳಗ್ಗೆ ಕಂಡು ಬಂತು. ಸೇತುವೆ ಮುಳುಗಡೆಯಾಗುವ ಮುನ್ಸೂಚನೆ ಅರಿತ ಕಳಸ ಪೊಲೀಸರು ಬುಧವಾರ ರಾತ್ರಿಯೇ ಸೇತುವೆ ಮೇಲೆ ವಾಹನ ಸಂಚಾರವನ್ನು ನಿಷೇಧಿಸಿದ್ದರು. ಗುರುವಾರ ಬೆಳಗ್ಗೆ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ನಂತರ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ ಎಂದು ತಿಳಿದು ಬಂದಿದೆ.

ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲೂ ಬುಧವಾರ ರಾತ್ರಿಯಿಂದ ನಿರಂತರ ಮಳೆಯಾಗಿದ್ದು, ಮಳೆಯಿಂದಾಗಿ ಕೆಲವೆಡೆ ರಸ್ತೆಗಳಿಗೆ ಭಾರೀ ಹಾನಿಯಾದ ಬಗ್ಗೆ ವರದಿಯಾಗಿದೆ. ತಾಲೂಕಿನ ಜಯಪುರದಿಂದ ಮೇಲ್ಪಾಲ್ ಮಾರ್ಗವಾಗಿ ಹೊಡ್ಸಾಲು ಗ್ರಾಮ ಸಂಪರ್ಕಿಸುವ ಗ್ರಾಮೀಣ ರಸ್ತೆ ಇತ್ತೀಚೆಗೆ ಸುರಿದ ಮಳೆಗೆ ಶಿಥಿಲಗೊಂಡಿತ್ತು. ಬುಧವಾರ ರಾತ್ರಿ ಸುರಿದ ಮಳೆಗೆ ಈ ರಸ್ತೆ ಸುಮಾರು 300 ಮೀ. ಉದ್ದ, 10 ಅಡಿ ಆಳಕ್ಕೆ ಕುಸಿದು ಬಿದ್ದಿದ್ದು, ಸದ್ಯ ಮೇಲ್ಪಾಲು-ಹೊಡ್ಸಲು ಗ್ರಾಮಗಳು ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಪರ್ಕ ರಸ್ತೆಯಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಕೊಪ್ಪ ತಾಲೂಕು ವ್ಯಾಪ್ತಿಯಲ್ಲೂ ಮಳೆ ಅವಾಂತರ ಸೃಷ್ಟಿಸಿದೆ. ತಾಲೂಕು ವ್ಯಾಪ್ತಿಯಲ್ಲಿರುವ ಕೊಪ್ಪ-ಗುಡ್ಡೆತೋಟ ಸಂಪರ್ಕ ರಸ್ತೆ ಕಳೆದ ನಾಲ್ಕು ದಿನಗಳಿಂದ ಕುಸಿಯುವ ಸ್ಥಿತಿಯಲ್ಲಿದ್ದ ರಸ್ತೆಯಲ್ಲಿ ಗುರುವಾರ ನಾಲ್ಕು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಸಂಪೂರ್ಣವಾಗಿ ಕುಸಿಯುವ ಭೀತಿ ಗ್ರಾಮಸ್ಥರನ್ನು ಆವರಿಸಿದೆ. ತಾಲೂಕು ವ್ಯಾಪ್ತಿಯ ಕಣತಿ ಎಂಬಲ್ಲಿ ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿಯಲ್ಲಿ ಧರೆ ಕುಸಿಯುತ್ತಿದ್ದು, ವಾಹನ ಸವಾರರು ಆತಂಕದಲ್ಲೇ ವಾಹನ ಚಲಾಯಿಸುವಂತಾಗಿದೆ.

ಶೃಂಗೇರಿ ತಾಲೂಕು ವ್ಯಾಪ್ತಿಯ ಕಿಗ್ಗಾ, ಕೆರೆಕಟ್ಟೆ, ಶೃಂಗೇರಿ, ನೆಮ್ಮಾರು, ಅಗಳಗಂಡಿ, ಬಿದರಗೋಡು ಮತ್ತಿತರ ಕಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈ ಭಾಗದ ತುಂಗಾನದಿ ಸೇರಿದಂತೆ ಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಶೃಂಗೇರಿ ಪಟ್ಟಣದಲ್ಲಿ ತುಂಗಾ ನದಿಯ ನೆರೆ ನೀರು ಗಾಂಧಿ ಮೈದಾನವನ್ನು ಆವರಸಿಕೊಂಡಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪ್ರವಾಸಿಗರು, ವಾಹನಗಳ ಸಂಖ್ಯೆ ಕಡಿಮೆ ಕಂಡು ಬರುತ್ತಿವೆ. ಮಲೆನಾಡು ವ್ಯಾಪ್ತಿಯಲ್ಲಿ ಗುರುವಾರ ಸಂಜೆಯಿಂದ ಮಳೆ ಮತ್ತೆ ಬಿರುಸುಗೊಂಡಿರುವ ಬಗ್ಗೆ ವರದಿಯಾಗಿದೆ.

ಇನ್ನು ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಯಿಂದ ಗುರುವಾರ ಸಂಜೆಯವರೆಗೂ ನಿರಂತರವಾಗಿ ಸಾಧಾರಣ ಮಳೆಯಾಗುತ್ತಿದೆ. ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ದತ್ತಪೀಠದ ಗಿರಿಶ್ರೇಣಿಗಳಲ್ಲಿ ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಧರೆ ಕುಸಿತ ಉಂಟಾಗಿದ್ದು, ವಾನನಗಳ ಸಂಚಾರವನ್ನು ಗುರುವಾರ ಬೆಳಗ್ಗೆಯಿಂದಲೇ ನಿಷೇಧಿಸಲಾಗಿತ್ತು. ಇನ್ನು ಕಡೂರು, ತರೀಕೆರೆ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ತರೀಕೆರೆ ತಾಲೂಕು ವ್ಯಾಪ್ತಿಯ ಲಕ್ಕವಳ್ಳಿ ಭದ್ರಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ತಗ್ಗು ಪ್ರದೇಶಗಳ ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News