ಹನೂರು: ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ
ಹನೂರು,ಆ.16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವ ಸಹಾಯ ಸಂಘಗಳ ವತಿಯಿಂದ ಹನೂರು ಕ್ಷೇತ್ರದ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಯೋಜನೆಯ ವಲಯ ಮೇಲ್ವಿಚಾರಕ ಬಾಲಕೃಷ್ಣಗೌಡ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದೆ. ಈ ದಿಸೆಯಲ್ಲಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದರ ಮೂಲಕ ಉತ್ತಮ ಪರಿಸರವನ್ನು ನಿರ್ಮಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ದಿಸೆಯಲ್ಲಿ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿರುವ ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಶುಚಿಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಜನರಲ್ಲಿ ಸ್ವಚ್ಛತೆಯ ಬಗ್ಗೆ ಹಾಗೂ ಪರಿಸರದ ಮಹತ್ವದ ಬಗ್ಗೆ ಅರಿವು ಮೂಢಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಬಂಧಕ ಪ್ರದೀಪ್ ಕುಮಾರ್ ಮಾತನಾಡಿ, ಗ್ರಾಮವು ಸುಭೀಕ್ಷೆಯಿಂದ ಕೂಡಿರಬೇಕಾದರೆ ಧಾರ್ಮಿಕ ಕೇಂದ್ರಗಳು, ಶಾಲೆ, ಸಾರ್ವಜನಿಕ ಸ್ಥಳಗಳು ಶುಚಿತ್ವವಾಗಿ ಇರಬೇಕು. ಹೀಗಿದ್ದಾಗ ಮಾತ್ರ ಗ್ರಾಮದ ಜನರು ಆರೋಗ್ಯಯುತ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಆರ್.ಎಸ್ ದೊಡ್ಡಿ ಶ್ರೀ ಜಲಕಂಠೇಶ್ವರ ದೇವಸ್ಥಾನ, ಚಿಗತಾಪುರದ ಮಜೀದ್ ಇಲಾಹಿ ಮಸೀದಿ, ವೈಶಾಂಪಾಳ್ಯದ ಶಿವಲಂಕಾರೇಶ್ವರ ದೇಗುಲ, ಚಂಗವಾಡಿಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಪುಷ್ಪಪುರದ ಶ್ರೀ ಮಾರಮ್ಮನ ದೇಗುಲ, ಶಾಗ್ಯದ ಶ್ರೀ ಶನೈಶ್ಚರ ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಪಂಚಾಯತ್ ಸದಸ್ಯರು, ದೇಗುಲದ ಆಡಳಿತ ಮಂಡಳಿ ಸದಸ್ಯರು, ಯೋಜನೆಯ ಸೇವಾಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದ್ದರು.