ಚಾಮರಾಜನಗರ: ಕಬಿನಿ, ಕೆ.ಆರ್.ಎಸ್‍ ನಿಂದ ಮತ್ತಷ್ಟು ನೀರು ಬಿಡುಗಡೆ; ಮುಂಜಾಗೃತೆಗಾಗಿ ಜಿಲ್ಲಾಧಿಕಾರಿ ಮನವಿ

Update: 2018-08-16 17:56 GMT

ಚಾಮರಾಜನಗರ, ಆ.16: ಕಬಿನಿ ಜಲಾಶಯ ಹಾಗೂ ಕೆ.ಆರ್.ಎಸ್. ಅಣೆಕಟ್ಟೆಯಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿರುವ ಸಾಧ್ಯತೆ ಹಿನ್ನಲೆಯಲ್ಲಿ ಕೊಳ್ಳೆಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಮುಂಜಾಗರೂಕತೆ ವಹಿಸಬೇಕು ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಂದು ತಿಳಿಸಿದ್ದಾರೆ.

ಕಬಿನಿ ಜಲಾಶಯದಿಂದ 75 ಸಾವಿರ ಕ್ಯೂಸೆಕ್ಸ್, ಕೆ.ಆರ್.ಎಸ್. ಅಣೆಕಟ್ಟೆಯಿಂದ 1 ಲಕ್ಷದ 25 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂಬ ಮಾಹಿತಿ ಸ್ವೀಕರಿಸಲಾಗಿದೆ. ಮಳೆಯು ಸಹ ಹೆಚ್ಚಾಗುತ್ತಿರುವುದರಿಂದ ಕೆ.ಆರ್.ಎಸ್. ಅಣೆಕಟ್ಟೆಯಿಂದ ಮತ್ತಷ್ಟು ಹೆಚ್ಚಿನ ನೀರನ್ನು ಬಿಡುವ ಸಾಧ್ಯತೆ ಇರುವುದಾಗಿ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ನದಿಗೆ ಬಿಡುಗಡೆಗೊಳಿಸಿರುವ ನೀರಿನಿಂದ ದಾಸನಪುರ, ಮುಳ್ಳುರು, ಹಳೇ ಹಂಪಾಪುರ, ಹಳೇ ಅಣಗಳ್ಳಿ ಗ್ರಾಮಗಳು ನೀರಿನಿಂದ ಅವೃತವಾಗಿದ್ದು, ಗಂಜಿಕೇಂದ್ರ ತೆರೆಯಲು ಕ್ರಮ ವಹಿಸಲಾಗುತ್ತಿದೆ. 

ಪ್ರಸ್ತುತ ನದಿಗೆ ಜಲಾಶಯಗಳಿಂದ ಹೆಚ್ಚಿನ ನೀರನ್ನು ಹೊರಬಿಡುತ್ತಿರುವುದರಿಂದ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಮತ್ತು ನದಿದಂಡೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಆಸ್ತಿ-ಪಾಸ್ತಿ, ಜಾನುವಾರುಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನದಿಗಳಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಜಾನುವಾರು ತೊಳೆಯುವುದು, ಈಜು ಇನ್ನಿತರ ಚಟುವಟಿಕೆಗಳನ್ನು ಮಾಡಬಾರದು. ನದಿ, ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ನದಿಗೆ ಇಳಿಯಬಾರದು. ಪ್ರವಾಹದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ವಹಿಸಲು ನಿಯೋಜಿತರಾಗಿರುವ ಆಗಮಿಸುವ ಅಧಿಕಾರಿ, ಸಿಬ್ಬಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News