ಕೊಡಗಿನಲ್ಲಿ ಸೇನಾ ಪಡೆಯ ಎರಡು ತುಕಡಿಗಳಿಂದ ಕಾರ್ಯಾಚರಣೆ: ಸಚಿವ ಎಚ್.ಡಿ.ರೇವಣ್ಣ

Update: 2018-08-16 18:12 GMT

ಮಡಿಕೇರಿ, ಆ.16: ಕೊಡಗಿನಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದ ಸಮಸ್ಯೆ ಸಂಬಂಧಿತ ಶುಕ್ರವಾರದಿಂದಲೇ ಸೇನಾ ಪಡೆಯ ಎರಡು ತುಕಡಿಗಳ ಸಹಾಯದೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ  ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ರೇವಣ್ಣ, ಈಗಾಗಲೇ ಮಳೆಯಲ್ಲಿ ನಿರಾಶ್ರಿತರಾದವರಿಗೆ 10 ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಗುಡ್ಡದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಪ್ರಯತ್ನಿಸಲಾಗುತ್ತದೆ. ಅಂತೆಯೇ ಕೊಡಗಿನಲ್ಲಿ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಕ್ಕೆ ಕಾರಣವಾಗಿರುವ ರಸ್ತೆಗಳ ದುರಸ್ಥಿಗಾಗಿ ಲೋಕೋಪಯೋಗಿ ಇಲಾಖೆಯ ಉಪವಿಭಾಗೀಯ ಕಚೇರಿಯನ್ನೇ ಮಡಿಕೇರಿಯಲ್ಲಿ ಶುಕ್ರವಾರ ತೆರೆಯಲಾಗುತ್ತಿದೆ ಎಂದರು.

ಇನ್ನು 7 ದಿನಗಳಲ್ಲಿ ರಸ್ತೆ ದುರಸ್ಥಿ ಕಾರ್ಯಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡು ಈಗಾಗಲೇ ಸಂಪರ್ಕ ಕಳೆದುಕೊಂಡ ರಸ್ತೆಗಳಲ್ಲಿ ಸಂಪರ್ಕ ಮರುಸ್ಥಾಪನೆಗೆ ಮುಂದಾಗುವುದಾಗಿ ಹೇಳಿದರು. ಸಂಚಾರಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ಆದ್ಯತೆ ಮೇರೆ ಕ್ರಮ ಕೈಗೊಳ್ಳಲಾಗುತ್ತದೆ. ಮಳೆ ಕಡಿಮೆಯಾದ ಕೂಡಲೇ ಸಮಸ್ಯೆಗೊಳಗಾದ ರಸ್ತೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ರೇವಣ್ಣ ಹೇಳಿದರು. 

ಭೂಕುಸಿತದಿಂದ ಸಾವನ್ನಪ್ಪಿದ್ದ 3 ಜನರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ ರೇವಣ್ಣ, ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲಾಡಳಿತದ ಬಳಿ 20 ಕೋಟಿ ರೂ.ಗಳು ಇದೆ. ಸರ್ಕಾರ ಎಲ್ಲಾ ರೀತಿಯಲ್ಲಿಯೂ ಕೊಡಗಿನ ಅತಿವೃಷ್ಟಿ ಸಂಬಂಧಿತ ಸಮಸ್ಯೆಗೆ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. 

ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News