ಮೈಸೂರು: ವರುಣಾ ನಾಲೆಗೆ ನೀರು ಹರಿಸಲು ರೈತರ ಒತ್ತಾಯ

Update: 2018-08-16 18:15 GMT

ಮೈಸೂರು,ಆ.16: ವರುಣಾ ನಾಲಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಿಟ್ಟು ಬಿಟ್ಟು ನೀರು ಬಿಡುವುದರಿಂದಾಗಿ ಕೊನೆ ಭಾಗದ ರೈತರು ಬೆಳೆ ಬೆಳೆಯಲು ಸಮಸ್ಯೆಯುಂಟಾಗಿದ್ದು, ಕೂಡಲೇ ಸತತ ನೀರು ಬಿಡುವ ಆದೇಶ ಹೊರಡಿಸದಿದ್ದರೆ ನಗರದ ಕಾಡಾ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವರುಣಾ ನಾಲಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ಎಚ್ಚರಿಸಿದೆ.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಪಿ ಗಂಗಾಧರ ಲಲಿತಾದ್ರಿಪುರ, ಮಂಡ್ಯದಲ್ಲಿ ಬತ್ತ ನಾಟಿ ಮಾಡಿದ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರೈತರು ಬತ್ತ ನಾಟಿ ಕಾರ್ಯ ಮಾಡಬೇಕೆಂದು ಸೂಚಿಸಿದ್ದರೂ, ಕಾವೇರಿ ನಿಗಮದ ಅಧಿಕಾರಿಗಳು ನಾಟಿ ಮಾಡದಂತೆ ಪ್ರಚಾರ ಕೈಗೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಅಲ್ಲದೆ, ವರುಣಾ ನಾಲೆ ವ್ಯಾಪ್ತಿಯಲ್ಲಿ 45 ಗ್ರಾಮಗಳ 80 ಸಾವಿರ ಎಕರೆ ಪ್ರದೇಶ ಬರುತ್ತಿದ್ದು, ಕೆ.ಆರ್.ಎಸ್‍ನ ಇತರೆ ನಾಲೆಗಳಿಗೆ ಸತತ ನೀರು ಬಿಟ್ಟರೂ ವರುಣಾ ನಾಲೆ ಪ್ರದೇಶಕ್ಕೆ ಮಾತ್ರ ಆ ರೀತಿ ಮಾಡದೇ ರೈತರಿಗೆ ಅನ್ಯಾಯ ಎಸಗಲಾಗುತ್ತಿದೆ. 20 ದಿನ ನೀರು ಬಿಟ್ಟು 10 ದಿನ ಗೇಟ್ ಬಂದ್ ಮಾಡಲಾಗುತ್ತದೆ. ಹೀಗಾಗಿ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಕೆ.ಆರ್.ಎಸ್.ನಲ್ಲಿ 70 ಅಡಿ ನೀರಿದ್ದಾಗಲೇ ಬತ್ತ ಬೆಳೆದ ಉದಾಹರಣೆ ಇರುವಾಗ ಈಗ ಕೆ.ಆರ್.ಎಸ್. ಭರ್ತಿಯಾಗಿ ದುಪ್ಪಟ್ಟು ನೀರು ತಮಿಳುನಾಡು, ಸಮುದ್ರ ಸೇರಿರುವ ವೇಳೆ ಏಕೆ ಇಲ್ಲಿನ ಭಾಗದವರಿಗೆ ಸಮರ್ಪಕವಾಗಿ ನೀರು ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.

ಜೊತೆಗೆ, ಭತ್ತ ನಾಟಿಗೆ ಕೂಡಲೇ ಅನುಮತಿ ನೀಡದಿದ್ದಲ್ಲಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಂದ್ರಶೇಖರ ಆರಾಧ್ಯ, ಮಹದೇವಸ್ವಾಮಿ, ಬಸವರಾಜು ಪಾಳ್ಯ, ವರುಣಾ ಹೋಬಳಿ ರೈತರ ಮುಖಂಡರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News