ನನ್ನ ಆಪ್ತಮಿತ್ರ: ಎಲ್.ಕೆ ಅಡ್ವಾಣಿ ಕಣ್ಣೀರು

Update: 2018-08-16 18:53 GMT

ಹೊಸದಿಲ್ಲಿ, ಆ.16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ, ವಾಜಪೇಯಿಯವರು 65 ವರ್ಷಗಳ ಕಾಲ ನನ್ನ ಆಪ್ತ ಸ್ನೇಹಿತರಾಗಿದ್ದರು ಎಂದು ತಿಳಿಸಿದ್ದಾರೆ.

ಭಾರತದ ಅಗ್ರಮಾನ್ಯ ರಾಜಕಾರಣಿ ಹಾಗೂ ನನ್ನ ಗೆಳೆಯ ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆ ದುಃಖವನ್ನು ಮಾತುಗಳಲ್ಲಿ ವ್ಯಕ್ತಪಡಿಸಲು ನನ್ನಿಂದ ಸಾಧ್ಯವಿಲ್ಲ. ನನ್ನ ಪಾಲಿಗೆ ಅವರು ಓರ್ವ ಸಹೋದ್ಯೋಗಿಗಿಂತ ಹೆಚ್ಚಾಗಿದ್ದರು. ಕಳೆದ 65 ವರ್ಷಗಳಿಂದ ಅವರು ನನ್ನ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು ಎಂದು ಅಡ್ವಾಣಿ ತಿಳಿಸಿದ್ದಾರೆ.

ದೇಶದ ಮೊದಲ ಕಾಂಗ್ರೆಸೇತರ ಸರಕಾರವನ್ನು ಮುನ್ನಡೆಸಿದ ನಾಯಕ ಎಂದು ಅಟಲ್‌ಜಿಯವರನ್ನು ಈ ದೇಶ ನೆನಪಿಸಿ ಕೊಳ್ಳಲಿದೆ. ಅವರ ಸಹಾಯಕನಾಗಿ ಆರು ವರ್ಷಗಳ ಕಾಲ ದುಡಿಯುವ ಭಾಗ್ಯ ನನಗೆ ಲಭಿಸಿದೆ ಎಂದು ಅಡ್ವಾಣಿ ತಿಳಿಸಿದ್ದಾರೆ. ಹಿರಿಯರಾಗಿ ಅವರು ಸದಾ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು ಮತ್ತು ಸಾಧ್ಯವಿರುವ ಎಲ್ಲ ರೀತಿಯಿಂದಲೂ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಅವರ ಆಕರ್ಷಕ ನಾಯಕತ್ವ ಗುಣಗಳು, ಪುಳಕಗೊಳಿಸುವ ಮಾತಿನ ಶೈಲಿ, ದೇಶಭಕ್ತಿ ಮತ್ತು ಎಲ್ಲದಕ್ಕಿಂತಲೂ ಮಿಗಿಲಾಗಿ ಕರುಣೆ, ದಯೆ ಮುಂತಾದ ಮಾನವೀಯ ಗುಣಗಳು ಮತ್ತು ಸೈದ್ಧಾಂತಿಕ ವೈರುಧ್ಯಗಳ ಹೊರತಾಗಿಯೂ ವಿರೋಧಿಗಳ ಹೃದಯವನ್ನೂ ಗೆಲ್ಲುತ್ತಿದ್ದ ಅವರ ಸಾಮರ್ಥ್ಯ ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದು ಅಡ್ವಾಣಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News