ವಾಜಪೇಯಿರವರ ಆರ್ದಶ ಯುವ ರಾಜಕಾರಣಿಗಳಿಗೆ ಪ್ರೇರಣೆ: ಶಾಸಕ ಜ್ಯೋತಿಗಣೇಶ್

Update: 2018-08-17 11:48 GMT

ತುಮಕೂರು,ಆ.17: ರಾಜಕಾರಣಿಯೆಂದರೆ ಅಟಲ್ ಜೀ ರವರಂತೆಯೇ ಇರಬೇಕು. ಯಾರನ್ನೂ ಎಂದಿಗೂ ಸಹ ವಿನಾಕಾರಣ ಟೀಕಿಸದೆ ಮನಸ್ಸನ್ನು ನೋಯಿಸದೆ ರಾಜಕರಣದ ಉತ್ತಂಗದ ಶಿಖರವನ್ನು ಏರಿದ ಮೇರು ಪರ್ವತ ಅಟಲ್ ಬಿಹಾರಿ ವಾಜಪೇಯಿ ಎಂದು ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ  ಜ್ಯೋತಿಗಣೇಶ್ ತಿಳಿಸಿದ್ದಾರೆ.

ನಗರದ ಕೆ.ಆರ್.ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರಿಗೆ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಅವರು, ಸತತ ಸೋಲುಗಳಿಂದ ಎಂದೂ ಕಂಗೆಡದೆ, ಸುಧೀರ್ಘ 40 ವರ್ಷಗಳ ಕಾಲ ವಿರೋಧ ಪಕ್ಷವನ್ನು ಮುನ್ನಡೆಸಿ, ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿರುವುದು ನಮ್ಮೆಲ್ಲರಿಗೂ ಮಾದರಿ ಎಂದರು.

ಇಂದಿನ ರಾಜಕಾರಣದಲ್ಲಿ ಕುರ್ಚಿಯ ಆಸೆಯೊಂದೆ ರಾಜಕಾರಣಿಯಾಗಲು ಅಥವಾ ರಾಜಕಾರಣಕ್ಕೆ ಬರಲು ಮಾನದಂಡವಾಗಿದೆ. ಸಾಮಾಜಿಕ ಸೇವೆಯ ಆಶಯದೊಂದಿಗೆ ರಾಜಕಾರಣಿಯಾಗಲು ಯುವ ಸಮೂಹ ಬಯಸದೇ ಇರುವುದು ವಿಷಾದದ ಸಂಗತಿ. ನಮ್ಮಂತಹ ಯುವ ಪೀಳಿಗೆಯು ಅಟಲ್ ಬಿಹಾರಿ ವಾಜಪೇಯಿ ಜೀ ರವರ ಜೀವನವನ್ನು ತಿಳಿದುಕೊಂಡು, ಆದರ್ಶಮಾಯಾವಾದ ರಾಜಕಾರಣ ನಡೆಸಿದರೆ ಮಾತ್ರ ರಾಜಕೀಯ ರಂಗದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ತಿಳಿಸಿದರು.

ತನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಯಶಸ್ವಿಯಾಗಬೇಕೆಂದರೆ ಅಭಿವೃದ್ದಿ ಕೆಲಸಗಳಿಂದ ಮಾತ್ರ ಸಾಧ್ಯ. ಸುವರ್ಣ ಚತುಷ್ಪತ ರಾಷ್ಟ್ರೀಯ ಹೆದ್ದಾರಿ, ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣಾ ಅಭಿಯಾನದ ಮೂಲಕ ದೇಶದಲ್ಲಿ ಅಭಿವೃದ್ದಿಯ ಕ್ರಾಂತಿಯನ್ನು ಮಾಡಿ ಭಾರತವನ್ನು ಪ್ರಕಾಶಿಸುವಂತೆ ಮಾಡಿದ ವಾಜಪೇಯಿರವರ ಆಗಲಿಕೆ ಅತ್ಯಂತ ದುಖಃ ತಂದಿದೆ. ಅವರ ಸರಳತೆಯನ್ನು ಅಳವಡಿಸಿಕೊಂಡು ರಾಜಕಾರಣ ನಡೆಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.   

ಈ ಸಂತಾಪ ಸಭೆಯಲ್ಲಿ ಮಾಜಿ ವಿಧಾನಪರಿಷತ್ತು ಸದಸ್ಯ ಡಾ. ಹುಲಿನಾಯ್ಕರ್, ಮಲ್ಲಿಕಾರ್ಜನ್, ಟಿ.ಎಸ್. ಸದಾಶಿವಯ್ಯ, ನಗರಧ್ಯಕ್ಷ ಸಿ.ಎನ್.ರಮೇಶ್, ಹೆಚ್.ಎಂ.ರವೀಶ್, ಕೊಪ್ಪಳ್ ನಾಗರಾಜು, ರುದ್ರೇಶ್, ವೇದಮೂರ್ತಿ, ಸರೋಜಗೌಡ, ಮುನಿಯಪ್ಪ, ಅನುಸೂಯಮ್ಮ, ಟಿ.ಹೆಚ್.ಹನುಂತರಾಜು, ಮಂಜುಳಾ ಆದರ್ಶ್, ಸಿದ್ದರಾಜುಗೌಡ, ಮಂಜುನಾಥ್, ಶಂಭುಲಿಂಗಸ್ವಾಮಿ ಹಾಗೂ ನೂರಾರು ಕಾರ್ಯಕರ್ತರು ಸಂತಾಪ ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News