×
Ad

ಹಾಸನ: ಪ್ಲಾಸ್ಟಿಕ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ; ಕೋಟ್ಯಾಂತರ ರೂ. ನಷ್ಟ

Update: 2018-08-17 19:20 IST

ಹಾಸನ,ಆ.17: ಪ್ಲಾಸ್ಟಿಕ್‍ನಿಂದ ವಿವಿಧ ಉತ್ಪನ್ನ ತಯಾರಿಸುವ ಪ್ಲಾಸ್ಟಿಕ್ ಪ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಒಳಗಿದ್ದ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಭಸ್ಮವಾದ ಘಟನೆ ಮಧ್ಯರಾತ್ರಿ ಸಂಭವಿಸಿದೆ. 

ನಗರದ ಸಮೀಪ ಕೆ.ಐ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ನ್ಯಾಷನಲ್ ಪ್ಲಾಸ್ಟಿಕ್ ಕಾರ್ಖಾನೆಗೆ ಕಳೆದ ರಾತ್ರಿ 2 ಗಂಟೆ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ. ತಕ್ಷಣ ಸ್ಥಳಿಯರು ಅಗ್ನಿಶಾಮಕ ಕಚೇರಿ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟರು.

ಗುರುವಾರ ರಾತ್ರಿ 2 ಗಂಟೆಯಿಂದ ಶುಕ್ರವಾರ ಮದ್ಯಾಹ್ನ 2 ಗಂಟೆಯವರೆಗೆ ಸತತವಾಗಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದರೂ ಸಹ ನಿಯಂತ್ರಣಕ್ಕೆ ಬಾರದೆ ಇಡೀ ಕಾರ್ಖಾನೆ ಸುಟ್ಟು ಕರಕಲಾಗಿದೆ. ಅಪಾರ ಪ್ರಮಾಣದ ಕಚ್ಚಾ ವಸ್ತುಗಳು ಸೇರಿದಂತೆ ಪ್ಲಾಸ್ಟಿಕ್ ಉತ್ಪನ್ನ ತಯಾರಿಸಲು ಬಳಸುತ್ತಿದ್ದ ಯಂತ್ರಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.

ಕೇರಳ ನಿವಾಸಿ ಸಿರಾಜ್ ಎಂಬವರಿಗೆ ಸೇರಿದ ಕೆ.ಐ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ನ್ಯಾಷನಲ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು, ಇದರಿಂದಾಗಿ ಕೋಟ್ಯಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಾರ್ಖಾನೆಯ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಹಾಸನ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News