ಮತ್ತೊಮ್ಮೆ ಜಲಾವೃತಗೊಂಡ ದಕ್ಷಿಣ ಕಾಶಿ ನಂಜನಗೂಡು

Update: 2018-08-17 15:32 GMT

ಮೈಸೂರು,ಆ.17: ಪಕ್ಕದ ಕೇರಳದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು,  ಕಬಿನಿ ಡ್ಯಾಂ ನಿಂದ 86 ಸಾವಿರ ಕ್ಯೂಸೆಕ್ ನೀರು ಹೊರಬಿಡುತ್ತಿರುವುದರಿಂದ ಮತ್ತೊಮ್ಮೆ ದಕ್ಷಿಣ ಕಾಶಿ ನಂಜನಗೂಡು ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳು ಜಲಾವೃತಗೊಂಡಿವೆ.

ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಹಿನ್ನಲೆಯಲ್ಲಿ ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಇನ್ನು ಅಕ್ಕ ಪಕ್ಕದ ಗದ್ದೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ. ತಾಲೂಕಿನ ಕುಳ್ಳಂಕನಹುಂಡಿ, ಹೆಜ್ಜಿಗೆ, ಕತ್ವಾಡಿಪುರ, ಪಟ್ಟಣದ ಹಳ್ಳದಕೇರಿ, ತೋಪಿನ ಬೀದಿ, ಒಕ್ಕಲಗೇರಿಗಳತ್ತ ಹರಿದ ಪ್ರವಾಹ ಹತ್ತಕ್ಕೂ ಹೆಚ್ಚುಮನೆಗಳನ್ನು ಜಲಾವೃತಗೊಳಿಸಿದೆ. ಬಹಳಷ್ಟು ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಸೇತುವೆ ರಸ್ತೆಗಳ ಮೇಲೆಲ್ಲಾ ನೀರು ಹರಿದುಬರುತ್ತಿದೆ. ವಾಹನ ಸಂಚಾರ ಸಂಕಷ್ಟಕ್ಕೊಳಗಾಗಿದ್ದು, ಇತಿಹಾಸ ಪ್ರಸಿದ್ಧ 16 ಕಾಲು ಮಂಟಪ ಶೇ.90% ಮುಳುಗಡೆಯಾಗಿದೆ. ದಕ್ಷಿಣ ಕಾಶಿ ಶ್ರೀಶ್ರೀಕಂಠೇಶ್ವರ ದೇವಸ್ಥಾನದ ಆವರಣದವರೆಗೂ ಕಪಿಲಾ ನದಿ ನೀರು ಹರಿದು ಬಂದಿದ್ದು, ಪರುಶರಾಮ ದೇವಸ್ಥಾನ ಅರ್ಧ ಮುಳುಗಿದೆ. ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದ ಆವರಣಕ್ಕೂ ನೀರು ಹರಿದು ಬಂದಿದೆ. ಅಯ್ಯಪ್ಪಸ್ವಾಮಿ ದೇವಸ್ಥಾನದ ಅರ್ಧಭಾಗ ಕೂಡ ಜಲಾವೃತಗೊಂಡಿದೆ.

ಪ್ರವಾಹ ಪೀಡಿತರಿಗೆ ಗಂಜಿಕೇಂದ್ರ ತೆರೆಯಲಾಗಿದ್ದು, ಗಂಜಿಕೇಂದ್ರಕ್ಕೆ ಚಾಪೆ, ದಿಂಬು, ಅಡುಗೆ ಸಾಮಾನುಗಳನ್ನು ಮಹಿಳೆಯರು ತಂದಿದ್ದಾರೆ. ನಿವೇಶನ, ಮನೆಗಳನ್ನು ನಿರ್ಮಿಸಿಕೊಡುವಂತೆ ಸಂತ್ರಸ್ಥರು ಆಗ್ರಹಿಸುತ್ತಿದ್ದಾರೆ.

ಸುತ್ತೂರು ಶ್ರೀಮಠದ ಗದ್ದುಗೆಯತ್ತಲೂ ಕಪಿಲೆ ಮುನ್ನುಗುತ್ತಿದ್ದು, ಮಧ್ಯಾಹ್ನದ ವೇಳೆಗೆ ಮತ್ತಷ್ಟು ಕ್ಯೂಸೆಕ್ ನೀರು ಬಿಟ್ಟರೆ, ಗದ್ದುಗೆಯ ತನಕವೂ ನೀರು ನುಗ್ಗಲಿದೆ. ಸುತ್ತೂರು ಸೇತುವೆ ಈಗಾಗಲೇ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸುತ್ತೂರು ಭಾಗದ ನೂರಾರು ಎಕರೆ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಅಪಾರ ಪ್ರಮಾಣದಲ್ಲಿ ಬೆಳೆನಷ್ಟ ಸಂಭವಿಸಿದ್ದು, ರೈತರು ಕಂಗಾಲಾಗಿದ್ದಾರೆ. 

1994ರಲ್ಲಿ ಪ್ರವಾಹ ಬಂದಿತ್ತು: ಕಳೆದ ಹದಿನಾಲ್ಕು ವರ್ಷಗಳ ಹಿಂದೆ, 1994ರಲ್ಲಿ ಇಂತದ್ದೇ ಪ್ರವಾಹ ಬಂದು ಜನ ಕಂಗಾಲಾಗಿದ್ದರು. ಈಗ ಮತ್ತೆ ಎರಡು ಬಾರಿ ಇಂತಹ ಪ್ರವಾಹ ಬಂದು ಜನರನ್ನು ಆತಂಕಕ್ಕೀಡು ಮಾಡಿದ್ದು, ದಿನೇ ದಿನೇ ಇದೇ ರೀತಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಬಂದ್: ಮೈಸೂರು-ನಂಜನಗೂಡು ರಸ್ತೆಯ ಮಲ್ಲನಮೂಲೆ ಮಠದ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಬಂದ್ ಮಾಡಲಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಕಬಿನಿ ಡ್ಯಾಂನಿಂದ ಹೆಚ್ಚುವರಿ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ರಸ್ತೆ ಜಲಾವೃತಗೊಂಡಿದೆ. ರಸ್ತೆಯಲ್ಲಿ ನಾಲ್ಕಡಿ ನೀರು ನಿಂತಿದ್ದು, ಬೆಳ್ಳಂಬೆಳಿಗ್ಗೆ ಪೊಲಿಸರು ರೋಡ್ ಬ್ಲಾಕ್ ಮಾಡಿದ್ದಾರೆ. ಎರಡು ಕಡೆ ಬ್ಯಾರೀಕೆಡ್ ಗಳನ್ನು ಅಳವಡಿಸಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಬಸವನಪುರ, ಕೆಂಪಿಸಿದ್ದನಹುಂಡಿ, ಅಡಕನಹಳ್ಳಿಹುಂಡಿ, ಕಡಕೊಳ ಮಾರ್ಗವಾಗಿ ವಾಹನಗಳು ತೆರಳುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News