ಸೋಮವಾರಪೇಟೆ: ಮನೆ ಗೋಡೆ ಕುಸಿದು ವ್ಯಕ್ತಿ ಮೃತ್ಯು

Update: 2018-08-17 16:35 GMT

ಸೋಮವಾರಪೇಟೆ,ಆ.17: ಮಾದಾಪುರ ಗ್ರಾಮ ಪಂ. ವ್ಯಾಪ್ತಿಯಲ್ಲಿ ಸತತವಾಗಿ ಸುರಿದ ಭಾರೀ ಮಳೆಗೆ ಉಂಟಾದ ಭೂಕುಸಿತಕ್ಕೆ ಮನೆ ಕುಸಿದು ಮೂವತ್ತೊಕ್ಲು ಗ್ರಾಮದ ಮುಕ್ಕಾಟಿರ ಉತ್ತಪ್ಪ(ಸಾಬು) ಎಂಬವರು ಮೃತಪಟ್ಟ ಘಟನೆ ನಡೆದಿದೆ. 

ಮೂವತ್ತೊಕ್ಲುವಿನ ಮುಕ್ಕಾಟಿರ ಸಾಬು ಹಾಗೂ ಪತ್ನಿ ತಂಗಮ್ಮ ಮನೆಯಲ್ಲಿರುವಾಗಲೇ ಭೂ ಕುಸಿತ ಉಂಟಾಗಿದೆ. ಇದನ್ನು ಗಮನಿಸಿದ ತಂಗಮ್ಮ ಅವರು ಮನೆಯಿಂದ ಹೊರಗಡೆ ಓಡಿ ಬಂದು ಪತಿಯನ್ನು ಕೂಗಿ ಕರೆದಿದ್ದಾರೆ. ಆದರೆ ಹೊರಬರುವುದಕ್ಕೂ ಮುನ್ನವೇ ಮನೆ ಕುಸಿದಿದ್ದು, ಪರಿಣಾಮ ಉತ್ತಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಎರಡು ದಿನಗಳಿಂದಲೇ ಅಲ್ಪ ಸ್ವಲ್ಪ ಭೂಕುಸಿತ ಉಂಟಾಗುತ್ತಿದ್ದು, ಮೂವತ್ತೊಕ್ಲು ಗ್ರಾಮದ ಮಾಚಯ್ಯ ಕುಟುಂಬ ಬೇರೆಡೆಗೆ ಸ್ಥಳಾಂತರಗೊಂಡಿದೆ. ಆದರೆ ಸಾಬು ಕುಟುಂಬ ಅಲ್ಲಿಯೇ ವಾಸ್ತವ್ಯ ಹೂಡಿತ್ತು ಎಂದು ತಿಳಿದುಬಂದಿದೆ. ಇವರ ಇಬ್ಬರು ಪುತ್ರರು ಮನೆಯಿಂದ ಹೊರಗಡೆಯಿದ್ದುದರಿಂದ ಅನಾಹುತದಲ್ಲಿ ಸಿಲುಕದೇ ಪಾರಾಗಿದ್ದಾರೆ.

ಇಡೀ ಮೂವತ್ತೊಕ್ಲು, ಶಿರಂಗಳ್ಳಿ ಸೇರಿದಂತೆ ಮಾದಾಪುರ ಹಾಗೂ ಗರ್ವಾಲೆ ಗ್ರಾಮ ಪಂ.ಯ ನೂರಾರು ಕುಟುಂಬಗಳು ಅಕ್ಷರಶಃ ಬೀದಿ ಪಾಲಾಗಿವೆ. ಸಂತ್ರಸ್ಥರನ್ನು ಮಾದಾಪುರ ಸರಕಾರಿ ಪ್ರಾಥಮಿಕ ಶಾಲೆ, ಸೋಮವಾರಪೇಟೆಯ ಕೊಡವ ಸಮಾಜ ಹಾಗೂ ಕಾಂಡನಕೊಲ್ಲಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಗರ್ವಾಲೆ ಗ್ರಾಮ ಪಂ. ಮತ್ತು ಮಾದಾಪುರ ಗ್ರಾಮ ಪಂ. ಯ ಸಾವಿರಾರು ಏಕರೆ ತೋಟ ಹಾಗೂ ಗದ್ದೆಗಳು ನಾಶವಾಗಿದ್ದು, ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರು ಸಂಬಂಧಿಕರ ಮನೆಗಳು ಸೇರಿದಂತೆ ಬೇರೆ ಊರಿಗೆ ಗುಳೇ ಹೊರಟಿದ್ದಾರೆ. 

ಮಾದಾಪುರ ಗ್ರಾಮ ಪಂ. ಸರಹದ್ದು ಮುಗಿದು ಗರ್ವಾಲೆ ಪಂ. ಆರಂಭವಾಗುತ್ತಿದ್ದಂತೆ ನೂರಾರು ಏಕರೆ ಭೂ ಪ್ರದೇಶದಲ್ಲಿ ಭಾರೀ ಕುಸಿತ ಕಂಡು ಬಂದದ್ದರಿಂದ ಗರ್ವಾಲೆ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಸಂಕಷ್ಟಕ್ಕೆ ಸಿಲುಕಿರುವ ಮಂಕ್ಯ, ಸೂರ್ಲಬ್ಬಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸೋಮವಾರಪೇಟೆಯ ರೋಟರಿ ಸಂಸ್ಥೆ, ಕೊಡವ ಸಮಾಜ ಹಾಗೂ ಸ್ವಯಂ ಸೇವಕರು ತಾಕೇರಿ ಮಾರ್ಗವಾಗಿ ತಮ್ಮ ಸ್ವಂತ ವಾಹನಗಳಲ್ಲಿ ಕರೆತಂದು ಪಟ್ಟಣದ ಕೊಡವ ಸಮಾಜದಲ್ಲಿ ಆಶ್ರಯ ಒದಗಿಸಿದ್ದಾರೆ. 

ಗಂಜಿ ಕೇಂದ್ರದಲ್ಲಿ ವಸತಿ, ವೈದ್ಯಕೀಯ, ಆಹಾರ ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಿರಂತರವಾಗಿ ನಡೆಯುತ್ತಿದೆ. ತಾಲೂಕಿನ ಮಾದಾಪುರ, ಸುಂಟಿಕೊಪ್ಪ, ಸೋಮವಾರಪೇಟೆ ಪಟ್ಟಣ, ಚೆಟ್ಟಳ್ಳಿ ಹಾಗೂ ಹಾರಂಗಿಯಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರದಲ್ಲಿರುವ ಸಂತ್ರಸ್ಥರು ಮತ್ತು ಮಕ್ಕಳ ಆರೋಗ್ಯದ ಕುರಿತು ನಿಗಾ ವಹಿಸಲಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಐದು ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 1500ಕ್ಕೂ ಅಧಿಕ ಸಂತ್ರಸ್ಥರು ವಾಸ್ತವ್ಯ ಹೂಡಿದ್ದಾರೆ. ಮಾದಾಪುರ ಹಾಗೂ ಕಾಂಡನಕೊಲ್ಲಿ ಶಾಲೆಯಲ್ಲಿ ಸುಮಾರು 500 ಸಂತ್ರಸ್ಥರು ವಾಸ್ತವ್ಯ ಹೂಡಿದ್ದಾರೆ. ಆರೋಗ್ಯ ತಪಾಸಣೆಗಾಗಿ ಪ್ರತಿ ಕೇಂದ್ರಕ್ಕೆ ಓರ್ವ ವೈದ್ಯರನ್ನು ನೇಮಿಸಲಾಗಿದೆ. ಮಾದಾಪುರ ಕೇಂದ್ರಕ್ಕೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ರವಿಕುಮಾರ್ ತಿಳಿಸಿದ್ದಾರೆ. ಸ್ಥಳಕ್ಕೆ ಮಕ್ಕಳ ತಜ್ಞ ಡಾ.ನವೀನ್ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಕೊಡವ ಸಮಾಜದಲ್ಲಿ ಡಾ.ಸುಪರ್ಣ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದು, ಇಬ್ಬರು ಸಂತ್ರಸ್ಥರು ಅಸ್ವಸ್ಥರಾಗಿರುವ ಹಿನ್ನಲೆಯಲ್ಲಿ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ. 

ಸಂತ್ರಸ್ಥರಿಗೆ ನೆರವಿನ ಮಹಾಪೂರ
ಮಾದಾಪುರ ಕೇಂದ್ರದಲ್ಲಿ ಚಿನ್ನಳ್ಳಿ ಗ್ರಾಮದ ಬೋಪಣ್ಣ ಸಂತ್ರಸ್ಥರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯ ಸಂಪೂರ್ಣ ಹೊಣೆ ಹೊತ್ತಿದ್ದು, ಅವರಿಗೆ ಮಾದಾಪುರ ಗ್ರಾಮ ಪಂ. ಅಧ್ಯಕ್ಷೆ ಲತಾ, ಸದಸ್ಯರುಗಳಾದ ಸೋಮಪ್ಪ, ಮಜೀದ್, ಪ್ರೇಮ, ಗ್ರಾಮದ ನೂರಾರು ಗ್ರಾಮಸ್ಥರು ಸಾಥ್ ನೀಡುತ್ತಿದ್ದಾರೆ. 

ಸೋಮವಾರಪೇಟೆ ವಿಭಾಗದ ಸಂಘಪರಿವಾರದ ಸ್ವಯಂ ಸೇವಕರು ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯನ್ನು ಲೆಕ್ಕಿಸದೆ, ಭೂಕುಸಿತ ಪ್ರದೇಶದಲ್ಲಿ ಒಳ ಪ್ರವೇಶಿಸಿ ಮಕ್ಕಂದೂರು, ಶಿರಂಗಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಂತ್ರಸ್ಥರನ್ನು ರಕ್ಷಿಸುವ ಕಾರ್ಯದಲ್ಲಿ ಮುಂದಾಗುವ ಮೂಲಕ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಮಕ್ಕಂದೂರು ಗ್ರಾಮದ ಸುಮಾರು 300ಕ್ಕೂ ಅಧಿಕ ಕುಟುಂಬವನ್ನು ರಕ್ಷಿಸುವುದರ ಜೊತೆಗೆ ಶುಕ್ರವಾರದಂದು ಸಂತ್ರಸ್ಥರನ್ನು ಸ್ಥಳಾಂತರಗೊಳಿಸುವ ಸಂದರ್ಭ ಆಗುವ ಸಂಚಾರ ಅಡಚಣೆಯನ್ನು ತಡೆಗಟ್ಟಲು ಮರಗಳನ್ನು ಕಡಿದು ದಾರಿಯನ್ನು ತೆರವುಗೊಳಿಸುವ ದೃಶ್ಯ ಕಂಡುಬಂತು. 

ಶಾಂತಳ್ಳಿ ಗ್ರಾಮ ಪಂ. ವ್ಯಾಪ್ತಿಯ ತಲ್ತರಶೆಟ್ಟಳ್ಳಿಯ ಜಾರನ ಮನೆ ಬಿ.ಆರ್.ಚಂದ್ರಹಾಸ್‍ರವರ ಮನೆಯ ಹಿಂಭಾಗದ ಬರೆ ಕುಸಿದಿದೆ. ಪಕ್ಕದ ಆನಂದ್ ಎಂಬುವರ ಮನೆಯ ಎರಡೂ ಭಾಗದಲ್ಲಿ ಬರೆ ಕುಸಿದಿದ್ದು, ಮನೆ ಅಪಾಯದ ಸ್ಥಿತಿಯಲ್ಲಿದೆ. ಅದೇ ಗ್ರಾಮದ ರಾಘವ ಎಂಬುವರಿಗೆ ಸೇರಿದ ತೋಟವೊಂದು ಕುಸಿದು ಬಿದ್ದಿದೆ. ರಾಮು ಎಂಬುವರಿಗೆ ಸೇರಿದ ತೋಟದ ಗುಡ್ಡ ಕುಸಿದು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಬಾಚಳ್ಳಿ ಗ್ರಾಮದ ಹಲವು ತೋಟಗಳಲ್ಲಿ ಭೂ ಕುಸಿತ ಉಂಟಾಗಿದ್ದು, ನೂರಾರು ಏಕರೆ ಗದ್ದೆಗಳು ನಾಶವಾಗಿವೆ. ಬೇಳೂರು ಗ್ರಾಮ ಪಂ. ವ್ಯಾಪ್ತಿಯ ಕುಸುಬೂರು ಗ್ರಾಮದ ನಿವಾಸಿ ಬಿ.ಎ.ಭಾಸ್ಕರ್ ರವರಿಗೆ ಸೇರಿದ ಕಾಫಿ ತೋಟದಲ್ಲಿ ಬರೆ ಕುಸಿದಿದ್ದು, ನೂರಾರು ಕಾಫಿ ಗಿಡಗಳು ಮಣ್ಣುಪಾಲಾಗಿದೆ.

ಹಮ್ಮಿಯಾಲ ಗ್ರಾಮದ ಕೊಚ್ಚೇರೆ ಮತ್ತು ಪಳೆಯಂಡ ಮತ್ತು ಮೊಣ್ಣಂಡ ಕುಟುಂಬಸ್ಥರ ಕುರಿತು ಈವರೆಗೆ ಯಾವುದೇ ಮಾಹಿತಿ ಲಭ್ಯವಾಗದಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಹಚ್ಚಿನಾಡು ಕಬ್ಬಣಿ ಗ್ರಾಮದ ನಾಪಂಡ ಗಣೇಶ್ ಮತ್ತು ಹತ್ತು ಗ್ರಾಮಸ್ಥರು ಗಾಬರಿಯಿಂದ ಬೆಟ್ಟವನ್ನು ಹತ್ತಿದ್ದು, ಮತ್ತಷ್ಟು ಅಪಾಯ ತಂದುಕೊಂಡಿದ್ದಾರೆ. ಸಹಾಯಕ್ಕಾಗಿ ಕೂಗಿ ಕರೆದರೂ ಯಾರಿಗೂ ಕೇಳದ ಪರಿಸ್ಥಿತಿ ಎದುರಾಗಿದೆ. ಕಾಲೂರು ಗ್ರಾಮದ ಪಳೆಯಂಡ, ಬೊಟ್ಟೋಳಂಡ, ತಂಬುಕುತ್ತೀರ ಕುಟುಂಬಸ್ಥರು ಕೂಡ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News