ವಾಜಪೇಯಿ ಶಾರೀರಿಕವಾಗಿ ಇಲ್ಲದಿದ್ದರೂ ಅವರ ಧ್ಯೇಯಗಳು ನಮ್ಮ ಜೊತೆ ಇವೆ: ಅರವಿಂದ ಲಿಂಬಾವಳಿ

Update: 2018-08-17 16:44 GMT

ಮೈಸೂರು,ಆ.17: ಅಟಲ್‍ಜೀ ಯವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲ. ಆದರೂ ಅವರು ಕಟ್ಟಿ ಬೆಳೆಸಿದ ಧ್ಯೇಯಗಳು ನಮ್ಮ ಜೊತೆ ಇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು.

ನಗರದ ನಜರ್ ಬಾದ್ ನ ವಿ.ಕೆ.ಫಂಕ್ಷನ್ ಹಾಲ್‍ನಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಟಲ್ ಜೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರ ಹಿಡಿದಿದ್ದಕ್ಕೆ ಖುಷಿ ಪಟ್ಟಿದ್ದರು. ಸಾಮಾನ್ಯ ಕಾರ್ಯಕರ್ತರನ್ನು ಪ್ರೀತಿ ಮಾಡುವುದನ್ನು ಅವರಿಂದ ನೋಡಿ ಕಲಿತೆ. ಅಟಲ್ ಜೀಯವರು ಪ್ರತಿಯೊಂದು ವಿಷಯದಲ್ಲಿಯೂ ನಮಗೆ ಮಾರ್ಗದರ್ಶಕರು. ವಾಜಪೇಯಿಯವರು ಸದಾ ಕಾರ್ಯಕರ್ತರ ಜೊತೆ ಇರುತ್ತಿದ್ದರು. ಎಂದಿಗೂ ಅಟಲ್ ಜೀಯವರು ಸೇಡಿನ ರಾಜಕಾರಣ ಮಾಡಿಲ್ಲ. ಎಲ್ಲಾ ಪಕ್ಷದ ನಾಯಕರ ಜೊತೆ ಬೆರೆಯುತ್ತಿದ್ದರು ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, 2014 ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ವಾಜಪೇಯಿ, ಅಡ್ವಾಣಿಯವರೇ ಕಾರಣ. ತಮ್ಮ ಜೀವಿತಾವಧಿಯಲ್ಲಿ  ಬದಲಾವಣೆ ಆಗಬಹುದು ಎಂದು ತಿಳಿದಿದ್ದರು. ಇಂದು ಚತುಷ್ಪತ ರಸ್ತೆ ಮಾರ್ಗ ನಿರ್ಮಾಣ ವಾಗುತ್ತಿದೆ, ಇದಕ್ಕೆ ಮಾರ್ಗ ಹಾಕಿಕೊಟ್ಟವರು ವಾಜಪೇಯಿಯವರು. ಇಂದು ಮಕ್ಕಳು ಉತ್ತಮ ಮೇಜು ಕಟ್ಟಡಗಳಲ್ಲಿ ಕಲಿಯಲು ಕಾರಣ ವಾಜಪೇಯಿಯವರು ತಂದ ಸರ್ವ ಶಿಕ್ಷಣ ಅಭಿಮಾನ. ಅವರು ಶಾಂತಿ ಹಾಗೂ  ಸೌಮ್ಯ ಸ್ವಭಾವವನ್ನು ಹೊಂದಿದ್ದವರು. ಭಾರತ ಅಮೇರಿಕ ಇಂದು ಉತ್ತಮ ಸಂಬಂಧ ಹೊಂದಲು ಕೂಡ ಅವರು ಕಾರಣರಾಗಿದ್ದರು. ಸಾಮಾನ್ಯ ಜನರ ಜೊತೆ ಉತ್ತಮವಾಗಿ ಬೆರೆಯುತ್ತಿದ್ದರು ಎಂದರು.

ಇದೇ ವೇಳೆ ಬಿಜೆಪಿ ಪ್ರಮುಖರು ಅಟಲ್ ಜೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಶಾಸಕರಾದ ಎಲ್ ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ  ಡಾ.ಬಿ.ಹೆಚ್. ಮಂಜುನಾಥ್, ಕೋಟೆ ಶಿವಣ್ಣ, ಸಂದೇಶ್ ಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News