ಸಕಲೇಶಪುರ: ಮುಂದುವರೆದ ಮಳೆಯ ಅಬ್ಬರ; ಭಾರೀ ಪ್ರಮಾಣದ ಭೂಕುಸಿತ
ಸಕಲೇಶಪುರ,ಆ.17: ತಾಲೂಕಿನಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ನಿರಂತರ ಮಳೆಯಿಂದಾಗಿ ಹೆತ್ತೂರು ಹೋಬಳಿಯ ಐಗೂರು-ಹೆತ್ತೂರು ನಡುವಿನ ಐಗೂರು ಹೊಳೆ ತುಂಬಿ ಹರಿಯುತ್ತಿರುವುದರಿಂದ ಐಗೂರು ಪುರಾತನ ಸೇತುವೆ ಕೊಚ್ಚಿಹೋಗುವ ಭಯ ಅವರಿಸಿದೆ.
ದೊಡ್ಡಕಲ್ಲೂರು-ಐಗೂರು ನಡುವಿನ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕಾಗಿನೆರೆ-ಹೊಂಗಡಹಳ್ಳ ನಡುವಿನ ಬಾಳೆಹಳ್ಳ ಸಮೀಪ ಭೂಕುಸಿತವಾಗಿದ್ದು, ಗ್ರಾಮಸ್ಥರು ಸ್ವಸಹಾಯ ಪದ್ದತಿಯಿಂದ ರಸ್ತೆತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮಾಗೇರಿ ಸಮೀಪ ಕಳೆದ ಎರಡು ದಿನಗಳಿಂದ ಉಂಟಾಗಿದ್ದ ಭೂಕುಸಿತ ಮತ್ತಷ್ಟು ಹೆಚ್ಚಿದ್ದು, ಹಿಜ್ಜನಹಳ್ಳಿಯ 20 ಕುಟುಂಬಗಳು ಭಯಭೀತಿ ಅನುಭವಿಸುತ್ತಿದ್ದಾರೆ. ಗೊದ್ದು-ಸೋಮವಾರಪೇಟೆ, ಪಟ್ಲ-ಹಡ್ಲಗದ್ದೆ ನಡುವಿನ ರಸ್ತೆಗಳಲ್ಲೂ ಭಾರೀ ಮರಗಳು ಉರುಳಿದ್ದು, ಭೂಕುಸಿತ ನಿರಂತರವಾಗಿ ನಡೆಯುತ್ತಿದೆ. ಹೆತ್ತೂರು ಗ್ರಾಮದ ಸುಬ್ರಾಹಿ ಎಂಬವರ ಎರಡು ಎಕರೆ ಏಲಕ್ಕಿ ತೋಟ ಭೂಕುಸಿತದಿಂದ ಸಂಪೂರ್ಣ ನಾಶವಾಗಿದೆ.
ಹಾನುಬಾಳ್ ಹೋಬಳಿಯ ಕಾಡುಮನೆ-ಮಾರನಹಳ್ಳಿ ಸಂಪರ್ಕ ರಸ್ತೆಯಲ್ಲೂ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದರೆ, ಅತ್ತಿಬಿಡು, ಕುಂಬ್ರಹಳ್ಳಿ, ಹೊಡಚಹಳ್ಳಿ, ಮರಗುಂದ ಗ್ರಾಮಗಳಲ್ಲೂ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು ನೂರಾರು ಎಕರೆ ನಾಟಿ ಮಾಡಿದ ಭತ್ತದ ಗದ್ದೆಗಳು ಮಣ್ಣಿನಲ್ಲಿ ಮುಚ್ಚಿ ಹೋಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಸಬಾ ಹೋಬಳಿಯಲ್ಲೂ ಮಳೆ ಹೆಚ್ಚಿದ್ದು, ಜಾನೆಕೆರೆಹಳ್ಳ, ಅರೆಕೆರೆ ವಳಲೆಹಳ್ಳ, ಬಿಂಗೆಕಟ್ಟೆಹಳ್ಳ ಉಕ್ಕಿ ಹರಿಯುತ್ತಿರುವ ಪರಿಣಾಮ ನೂರಾರು ಎಕರೆ ಭತ್ತದಗದ್ದೆಗಳು ಜಲಾವೃತಗೊಂಡಿವೆ. ಅಲ್ಲದೆ ಹುಲ್ಲಹಳ್ಳಿ, ಬ್ಯಾಕರವಳ್ಳಿ, ಅರೆಕೆರೆ ಸೇರಿದಂತೆ ಹಲವೆಡೆ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಸನದ ಮಲೆನಾಡು ಭಾಗದ ಜನರನ್ನು ಅಪಾಯದಂಚಿಗೆ ತಂದು ನಿಲ್ಲಿಸಿದ್ದು, ಒಂದೇ ಸಮನೆ ಸುರಿಯುತ್ತಿರುವ ಮಳೆಯು ಜನರನ್ನ ಭಯಭೀತ ಗೊಳಿಸಿದೆ. ರಸ್ತೆಗಳು ಬಾಯ್ತೆರೆಯುತ್ತಿದ್ದರೆ, ಗುಡ್ಡಗಳು ಧರೆಗುರುಳುತ್ತಿವೆ. ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡು, ವಿದ್ಯುತ್ ಕೂಡ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.