ಮೂಡಿಗೆರೆ: ತಾಲೂಕು ಪತ್ರಕರ್ತರ ಸಂಘದಿಂದ ವಾಜಪೇಯಿಗೆ ಶ್ರದ್ಧಾಂಜಲಿ ಸಭೆ

Update: 2018-08-17 18:17 GMT

ಮೂಡಿಗೆರೆ, ಆ.17: ಅಜಾತಶತ್ರುವಾಗಿ ಗುರುತಿಸಿಕೊಂಡು ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಓರ್ವ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಪತ್ರಕರ್ತ ಪ್ರಸನ್ನ ಗೌಡಹಳ್ಳಿ ತಿಳಿಸಿದರು.

ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ನಿಧನಕ್ಕೆ ತಾಲೂಕು ಪತ್ರಕರ್ತರ ಸಂಘದ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ವಾಜಪೇಯಿ ಅವರು ವಿದ್ಯಾರ್ಥಿ ಜೀವನದಲ್ಲಿ ಎಡಪಂಥೀಯರಾಗಿ ಗುರುತಿಸಿಕೊಂಡವರು. ನಂತರ ಎಲ್ಲಾ ಪಕ್ಷದ ನಾಯಕರೊಂದಿಗೂ ಸ್ನೇಹ ಸಂಬಂಧವಿಟ್ಟುಕೊಂಡು ಅಜಾತ ಶತ್ರುವಾಗಿ ಗುರುತಿಸಿಕೊಂಡರು. ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷಗಳೂ ಕೂಡ ಇವರನ್ನು ಯಾವುದೇ ವಿಷಯಕ್ಕೆ ವಿರೋಧ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಅಂತಹ ಸಮರ್ಥ ನಾಯಕತ್ವ ಅವರದಾಗಿತ್ತು ಎಂದು ಬಣ್ಣಿಸಿದರು. 

ಪತ್ರಕರ್ತ ಎಂ.ಎಚ್.ಅಮರಾನಾಥ್ ಮಾತನಾಡಿ, ಸುವರ್ಣ ಚತುಷ್ಪಥ ರಸ್ತೆ ನಿರ್ಮಾಣದ ರೂವಾರಿ ವಾಜಪೇಯಿ ಅವರು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು. ದೇಶ ಕಂಡ ಮಹಾನ್ ರಾಜಕಾರಣಿಗಳಲ್ಲಿ ಓರ್ವರು. ಫೋಕ್ರೋನ್ ಅಣುಪರೀಕ್ಷೆಯನ್ನು ಅಂದಿನ ವಿಜ್ಞಾನಿ ಅಬ್ದುಲ್ ಕಲಾಂ ಅವರೊಂದಿಗೆ ಸೇರಿ ಯಶಸ್ವಿಯಾಗಿ ನಡೆಸಿದ್ದರು. ವಾಜಪೇಯಿ ಅವರ ಆದರ್ಶಗಳು ಇಂದಿನ ಜನಾಂಗಕ್ಕೆ ಸೂಕ್ತವಾಗಿದೆ ಎಂದರು. 

ಪತ್ರಕರ್ತರ ಸಂಘದ ಅಧ್ಯಕ್ಷ ಕಡಿದಾಳು ಸುಧೀರ್, ಪ್ರಸನ್ನಕುಮಾರ್, ನಯನ ತಳವಾರ, ಉಮಾಶಂಕರ್ ಹಾಗೂ ಪದಾಧಿಕಾರಿಗಳು ಇದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News