ನಿರಾಶ್ರಿತರಿಗೆ ಸಹಾಯ ಮಾಡಲು ಎಲ್ಲರೂ ಕೈಜೋಡಿಸಿ: ಸಿದ್ದರಾಮಯ್ಯ ಮನವಿ

Update: 2018-08-18 14:56 GMT

ಮೈಸೂರು,ಆ.18: ಈ ವರ್ಷ ಬಾರೀ ಪ್ರಮಾಣದ ಮಳೆ ಉಂಟಾಗಿದ್ದು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳು ಮಳೆಯಿಂದ ಸಂಕಷ್ಟಕ್ಕೆ ತುತ್ತಾಗಿದೆ. ನಿರಾಶ್ರಿತರಿಗೆ ಸಹಾಯ ಮಾಡಲು ಎಲ್ಲರೂ ಕೈಜೋಡಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ನಗರದ ಟಿ.ಕೆ.ಲೇಔಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಅರವತ್ತು ವರ್ಷಗಳಿಂದ ಕಂಡು ಕೇಳರಿಯದಂತಹ ಜಲಪ್ರವಾಹ ಕೊಡಗಿನ ಮಲೆನಾಡು ಪ್ರದೇಶಗಳಲ್ಲಿ ಆಗುತ್ತಿದೆ. ಈಗಾಗಲೇ ಕಂದಾಯ ಸಚಿವರಿಗೆ ಭೇಟಿ ನೀಡಿ ಅಲ್ಲಿನ ಜನರ ಸಂಕಷ್ಟಗಳನ್ನು ಆಲಿಸುವಂತೆ ತಿಳಿಸಿದ್ದೇನೆ. ಕೇಂದ್ರ ಸರ್ಕಾರ ಸಹ ಕೂಡಲೇ ರಕ್ಷಣೆಗೆ ಮುಂದಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳಕ್ಕೆ ಭೇಟಿ ನೀಡಿದಂತೆ ಕರ್ನಾಟಕಕ್ಕೂ ಭೇಟಿ ನೀಡಿ ವೈಮಾನಿಕ ಪರೀಕ್ಷೆ ನಡೆಸಿ ಹೆಚ್ಚಿನ ಪರಿಹಾರವನ್ನು ನೀಡಬೇಕೆಂದು ಹೇಳಿದರು. ಅಷ್ಟೆ ಅಲ್ಲದೇ, ನಾನು ಮಡಿಕೇರಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಕೂಡ ಕೊಡಗಿನ ಜನರ ನೋವಿಗೆ ಸ್ಪಂದಿಸಬೇಕು ಎಂದರು. 

ಪ್ರವಾಹ ಪೀಡಿ ನಂಜನಗೂಡಿಗೆ ಸಿದ್ದರಾಮಯ್ಯ ಭೇಟಿ: ಕಪಿಲಾ ನದಿಯ ನೀರಿನ ಆರ್ಭಟಕ್ಕೆ ನಲುಗಿರುವ ನಂಜನಗೂಡಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪ್ರವಾಹ ಪೀಡಿತ ಸ್ಥಳಗಳನ್ನು ಪರಿಶೀಲಿಸಿದರು. ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದವರೆಗೂ ಬಂದಿರುವ ನೀರನ್ನು ವೀಕ್ಷಿಸಿದರು. ನಂತರ ದಾಸೋಹ ಭವನದಲ್ಲಿ ತೆರಯಲಾಗಿರುವ ಗಂಜಿ ಕೇಂದ್ರಕ್ಕೆ ಭೇಟಿ ಅಲ್ಲಿ ಇರವು ನಿರಾಶ್ರಿತರನ್ನು ಸಂತೈಸಿದರು.

ಪ್ರವಾಹದಿಂದ ಹಾನಿಗೊಳಗಾಗಿರವು ಪ್ರದೇಶ ಮತ್ತು ಗ್ರಾಮಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಿ, ಯಾವುದೇ ಕಾರಣಕ್ಕೂ ಅಧಿಕಾರಿಗಳೂ ನಿರ್ಲಕ್ಷ್ಯ ಮಾಡಬೇಡಿ, ಸಂತ್ರಸ್ಥರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಕಗಳನ್ನು ಕಲ್ಪಿಸಿ ಎಂದು ಹೇಳಿದರು.

ಸಂಸದ ಆರ್.ಧ್ರುವನಾರಾಯಣ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ನಗರಸಭಾಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್, ನಾಗೇಂದ್ರ ಸೇರಿದಂತೆ ಹಲವರು ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News