ಪ್ರಾಣಾಪಾಯದಲ್ಲಿರುವ 175 ಮಂದಿಗಾಗಿ ರಕ್ಷಣಾ ಕಾರ್ಯ: ಜಿಲ್ಲಾಧಿಕಾರಿ ಶ್ರೀವಿದ್ಯಾ

Update: 2018-08-18 15:56 GMT

ಮಡಿಕೇರಿ, ಆ.18: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಮುಂದುವರೆದಿದ್ದು, ಪರಿಸ್ಥಿತಿ ಆಡಳಿತದ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀವಿದ್ಯಾ, ಜಿಲ್ಲೆಯಲ್ಲಿ 32 ನಿರಾಶ್ರಿತ ಶಿಬಿರಗಳಲ್ಲಿ ಈವರೆಗೂ 3400 ಮಂದಿಗೆ ಆಶ್ರಯ ನೀಡಲಾಗಿದೆ. ಜೋಡುಪಾಲದಲ್ಲಿ ಶನಿವಾರ ಭೂಕುಸಿತದಿಂದಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ಮಡಿಕೇರಿ ತಾಲೂಕಿನ ಮುಕ್ಕೋಡ್ಲು ವ್ಯಾಪ್ತಿಯಲ್ಲಿ 175 ಮಂದಿ ಪ್ರಾಣಾಪಾಯದಲ್ಲಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆದಿದೆ ಎಂದೂ ಶ್ರೀವಿದ್ಯಾ ತಿಳಿಸಿದರು. ಸೇನಾಪಡೆಯಿಂದ ಹಲವಾರು ಗ್ರಾಮಗಳಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮದೆನಾಡು, ಅರೆಕಲ್ಲು, ಸಂಪಾಜೆ ಗ್ರಾಮಗಳಿಗೂ ಸೇನಾ ಪಡೆಯ ತುಕಡಿ ತೆರಳಿದೆ ಎಂದೂ ಜಿಲ್ಲಾಧಿಕಾರಿ ಹೇಳಿದರು.

ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಿಂದ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಗಳು ಕೊಡಗಿಗೆ ಬಂದಿದ್ದು ವಿವಿಧ ನಿರಾಶ್ರಿತ ಶಿಬಿರಗಳಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಚೆಸ್ಕಾಂನಿಂದಲೂ 5 ತಂಡಗಳು ಜಿಲ್ಲೆಗೆ ಬಂದಿದ್ದು ವಿದ್ಯುತ್ ಸಂಪರ್ಕ ಮರುಕಲ್ಪಿಸಲುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ನಿರಾಶ್ರಿತ ಶಿಬಿರಗಳಲ್ಲಿ ಪುರುಷ ಮತ್ತು ಮಹಿಳಾ ರಕ್ಷಣಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕಲ್ಪನಾ ಠಿಕಾಣಿ ಹೂಡಿದ್ದು, ಕಾನೂನು ವಿಭಾಗದ ಎಡಿಜಿಪಿ ಬಿ.ಭಾಸ್ಕರ್ ರಾವ್ ಕೂಡ ಭಾನುವಾರದಿಂದ ಜಿಲ್ಲೆಯಲ್ಲಿ ರಕ್ಷಣಾ ಉಸ್ತುವಾರಿ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ನಿರಾಶ್ರಿತ ಶಿಬಿರಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಎಲ್ಲಾ ವಸ್ತುಗಳನ್ನು ಒದಗಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News