×
Ad

ಉಟ್ಟ ಬಟ್ಟೆಯಲ್ಲೇ ಬೆಟ್ಟ ಬಿಟ್ಟು ಬಂದರು: ಎಲ್ಲವನ್ನು ಕಳೆದುಕೊಂಡು ನೊಂದು, ಬೆಂದರು

Update: 2018-08-18 21:37 IST

ಮಡಿಕೇರಿ, ಆ.18: ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿ, ಹಸಿರ ಪರಿಸರದ ನಡುವಿನ ಕಾಫಿ ತೋಟಗಳಿಂದ ನಳನಳಿಸುತ್ತಿದ್ದ ಕಾಫಿ ತೋಟಗಳು ಗುಡ್ಡ ಕುಸಿತದ ಮಣ್ಣಿನಡಿ ಸಿಲುಕಿ ನಿಂತಿದೆ, ಬದುಕು ಹೇಗೋ ಸಾಗುತ್ತಿದೆ ಅನ್ನುವಷ್ಟರಲ್ಲೆ, ಪ್ರಾಕೃತಿಕ ವಿಕೋಪ ಗಬಕ್ಕನೆ ಕೈಯಲ್ಲಿದ್ದ ಸೌಭಾಗ್ಯವನ್ನು ಕಸಿದು ಕೊಂಡಿದೆ, ದುಃಖ ದುಮ್ಮಾನ, ನೋವು ಮಡುಗಟ್ಟಿ ನಿಂತಿದೆ.

ಕೊಡಗಿನ ಅತಿವೃಷ್ಟಿ ಹಾನಿಗಳ ಕೇಂದ್ರವಾಗಿ ಗುರುತಿಸುವ ಮಕ್ಕಂದೂರು ಗ್ರಾಮದ ತಂತಿಪಾಲ ಗ್ರಾಮದಲ್ಲಿ ಮಡ್ಲಂಡ ಕುಟುಂಬದ ಹಲವು ಕುಟುಂಬಗಳು ವಾಸವಿದ್ದು, ಕೃಷಿ ಚಟುವಟಿಕೆಗಳ ಮೂಲಕ ಬದುಕು ಕಟ್ಟಿಕೊಂಡಿದ್ದವು. ಸುರಿದ ಭಾರೀ ಗಾಳಿ ಮಳೆ ಅವರೆಲ್ಲರ ಕನಸುಗಳನ್ನು ಕಿತ್ತು ಕೊಂಡಿದೆ ರಾತೋರಾತ್ರಿ ಮಡ್ಲಂಡ ಪೂವಯ್ಯ, ಅವರ ಪತ್ನಿ ಚಿನ್ನಮ್ಮ, ಮಡ್ಲಂಡ ಗಣಪತಿ ಸೇರಿದಂತೆ ಕೆಲ ಮಂದಿ, ಕಣ್ಣೆದುರಿಗಿದ್ದ ಗುಡ್ಡ ಕುಸಿದು ತಮ್ಮ ಮನೆ, ತೋಟಗಳನ್ನು ಆಪೋಶನ ತೆಗೆದುಕೊಳ್ಳುವುದನ್ನು ಕಂಡು ತೀವ್ರ ಆತಂಕಕ್ಕೆ ಸಿಲುಕಿ, ರಾತ್ರೋರಾತ್ರಿ ಅರಣ್ಯ ಭಾಗಗಳಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಅಂದಾಜು ಐದಾರು ಕಿ.ಮೀ. ನಡೆದು ಕಾಲೂರಿಗೆ ಬಂದು, ಬಳಿಕ ಮಡಿಕೇರಿಗೆ ಬಂದು ಇದೀಗ ಮೈತ್ರಿ ಹಾಲ್‍ನ ಗಂಜಿ ಕೇಂದ್ರದಲ್ಲಿ ತಾತ್ಕಾಲಿಕ ನೆಲೆ ಕಂಡು ಕೊಂಡಿದ್ದಾರೆ. ಇವರ ಮುಂದಿನ ಬದುಕು ಹೇಗೆನ್ನುವುದನ್ನು ಕಾಲವೇ ನಿರ್ಧರಿಸಬೇಕಷ್ಟೆ.

ತಂತಿಪಾಲದ ಸುರೇಶ್, ಲೀಲಾವತಿ ಕಾರ್ಮಿಕ ದಂಪತಿಗಳು ನೆಲೆಸಿದ್ದು, ಇವರ ಮನೆ ಭಾರೀ ಭೂ ಕುಸಿತದಿಂದ ನಾಶವಾಗಿದೆ. ಈ ದಂಪತಿಗಳು ತಮ್ಮ 4 ತಿಂಗಳ ಮಗು ರಂಜನ್‍ನೊಂದಿಗೆ ಮತ್ತಿಬ್ಬರು ಪುಟಾಣಿ ಮಕ್ಕಳಾದ ಅಣ್ಣಪ್ಪ ಮತ್ತು ನಿತ್ಯ ಅವರನ್ನು ಕರೆದುಕೊಂಡು, ತಮ್ಮ ನೆರೆಕರೆಯವರ ನೆರವಿನೊಂದಿಗೆ ಗ್ರಾಮವನ್ನು ತ್ಯಜಿಸಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಿ ಮೈತ್ರಿ ಹಾಲ್‍ನಲ್ಲಿ ಆಶ್ರಯ ಪಡೆದಿದ್ದಾರೆ. 

ಮುಕ್ಕೋಡ್ಲು ವ್ಯಾಪ್ತಿಗೆ ಒಳಪಟ್ಟ ಕಾಲೂರು ವಿಭಾಗದಲ್ಲೂ ಪದಗಳಿಗೆ ನಿಲುಕದ ಪ್ರಾಕೃತಿಕ ವಿಕೋಪಗಳು ಘಟಿಸುತ್ತಿದ್ದು, ಗುಡ್ಡ ಕುಸಿದು ಕಿಲೋಮೀಟರ್ ಘಟ್ಟಲೆ ವ್ಯಾಪ್ತಿಯ ಪ್ರದೇಶವನ್ನು ಅಳಿಸಿಹಾಕುತ್ತಿದೆ. ಕಾಲೂರಿನ ಪಿ.ಎ.ಬಾಬು ಅವರು ಕುಟುಂಬದೊಂದಿಗೆ ಮನೆ ತೊರೆದು ಮಡಿಕೇರಿಗೆ ಆಗಮಿಸಿದ್ದು, ಇವರೆನ್ನುವಂತೆ ಕಾಲೂರು ಗ್ರಾಮದ ಬಹುತೇಕ ಮಂದಿ ಮನೆ ತೊರೆದಿದ್ದಾರೆ, ಪುನಃ ಹಿಂದಕ್ಕೆ ತೆರಳುವ ಕಲ್ಪನೆಯೂ ಮನದಲ್ಲಿ ಸುಳಿಯುತ್ತಿಲ್ಲ ಎನ್ನುತ್ತಾರೆ.

ಗಾಳಿಬೀಡು ವಿಭಾಗದ ಬಳಿಯಲ್ಲೆ ಬೆಟ್ಟ ಪ್ರದೇಶದ ಹೆಬ್ಬೆಟ್ಟಗೇರಿ ಗ್ರಾಮದ ಮೂವತ್ತಕ್ಕೂ ಹೆಚ್ಚಿನ ಮನೆಗಳು ನಿರ್ನಾಮವಾಗಿವೆ, ಭಾರೀ ಪ್ರಮಾಣದ ಗುಡ್ಡ ಕುಸಿತ ನಿರಂತರವಾಗಿ ಮುಂದುವರಿದಿರುವುದಾಗಿ ಗ್ರಾಮ ತೊರೆದು ಮಡಿಕೇರಿಯ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಗುರುವ ಮತ್ತು ಸರೋಜ ಹೇಳುತ್ತಾರೆ.

ಕಿಲೋ ಮೀಟರ್ ಗಟ್ಟಲೆ ನಡೆದ ಮಂದಿ: ಮಕ್ಕಂದೂರಿನ ತಂತಿಪಾಲದ ಒಂದು ಭಾಗದಲ್ಲಿ 50 ಕ್ಕೂ ಹೆಚ್ಚಿನ ಮನೆಗಳಿದ್ದು, ಇವುಗಳಲ್ಲಿ ಬಹುತೇಕ ಗುಡ್ಡ ಕುಸಿತದ ಮಣ್ಣಿನಿಂದ ಆವೃತ್ತವಾಗಿ ಸಮಸ್ಯೆ ಸೃಷ್ಟಿಯಾಗಿತ್ತು. ಅಲ್ಲಿನ ನಿವಾಸಿಗಳಾದ ಮೊಳ್ಳೇರ ಡಾರ ಎನ್ನುವಂತೆ, ಮನೆಗಳಿಗೆ ಹಾನಿ ಆಗದಿದ್ದರೂ, ಕುಸಿದ ಬೆಟ್ಟದ ಮಣ್ಣಿನ ರಾಶಿ ಮನೆಯನ್ನು ಆವರಿಸಿದೆ. ಕೆಸರು ನೀರಿನ ಪ್ರವಾಹ ತೀವ್ರ ಸಂಕಷ್ಟವನ್ನು ಉಂಟುಮಾಡಿತು. ಎರಡು ದಿನಗಳ ಹಿಂದೆಯೇ ಸಂಸಾರ ಸಹಿತ ಅಂದಾಜು 14 ಮಂದಿ 6 ಕಿ.ಮೀ.ನಷ್ಟು ನಡೆದು ಮಕ್ಕಂದೂರು ಮುಖ್ಯ ರಸ್ತೆಗೆ ಸೇರಿ ಇಲ್ಲಿಗೆ ಬಂದಿದ್ದೇವೆಂದು ತೀವ್ರ ಆತಂಕವನ್ನು ವ್ಯಕ್ತಪಡಿಸಿದರು. ತಂತಿಪಾಲದ ಬಳಿಯ ಅಂಚಿಕಾಡು ವಿಭಾಗದಲ್ಲಿ 14ಕ್ಕೂ ಹೆಚ್ಚಿನ ಮನೆಗಳು ಸಂಪೂರ್ಣ ನಾಶವಾಗಿರುವ ಬಗ್ಗೆಯೂ ಅವರು ತಿಳಿಸಿದರು.

ವೃದ್ಧೆಯ ರಕ್ಷಣೆಗೆ ನಡೆದ ಕಾರ್ಯಾಚರಣೆ: ಮಕ್ಕಂದೂರು ಗ್ರಾಮದ ನಿವಾಸಿ ಕುಂಬುಗೋಡನ ಪ್ರಸನ್ನ ಎಂಬವರ ಅಂದಾಜು 6 ಏಕರೆ ಕಾಫಿ ತೋಟ ಭಾರೀ ಗುಡ್ಡ ಕುಸಿತಕ್ಕೆ ಸಿಲುಕಿ ಸಂಪೂರ್ಣ ನಾಶವಾಗಿದ್ದು, ಮನೆ ಅಪಾಯದ ಸ್ಥಿತಿಗೆ ಎರಡು ದಿನಗಳ ಹಿಂದೆ ಸಿಲುಕಿಕೊಂಡಿತ್ತು. ಮನೆಯಲ್ಲಿದ್ದ ಪತ್ನಿ ಇಬ್ಬರು ಮಕ್ಕಳು ಹಾಗೂ ತಾಯಿ 72 ಪ್ರಾಯದ ವಿಜಯ ಲಕ್ಷ್ಮಿ ಅವರನ್ನು ಸ್ಥಳದಿಂದ ಪಾರು ಮಾಡುವುದು ಪ್ರಸನ್ನ ಅವರಿಗೆ ದೊಡ್ಡ ಸವಾಲಾಗಿತ್ತಾದರು, ಇದನ್ನು ನಿವಾರಿಸಿದವರು ಆರ್‍ಎಸ್‍ಎಸ್ ಕಾರ್ಯಕರ್ತರು ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಸಿಬ್ಬಂದಿಗಳು.

ಕುಸಿದ ಗುಡ್ಡ, ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ನಡುವೆ ಇವರ ರಕ್ಷಣೆಗೆ ಧಾವಿಸಿದ ಆರ್‍ಎಸ್‍ಎಸ್ ಕಾರ್ಯಕರ್ತರು, ವೃದ್ಧೆ ವಿಜಯಲಕ್ಷ್ಮಿ ಅವರನ್ನು ಅಡಿಕೆ ಮರದ ಕಂಬಗಳಿಂದ ತಯಾರಿಸಿದ ತಡಿಕೆಯಲ್ಲಿ ಕುಳ್ಳಿರಿಸಿ ಜೀವದ ಹಂಗುತೊರೆದು ಕಾಡು ಮೇಡುಗಳ ಪ್ರದೇಶವನ್ನು ಹಾಯ್ದು ಬರುವ ಪ್ರಯತ್ನ ನಡೆಸಿದರಾದರೆ, ಇವರಿಗೆ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಸಿಬ್ಬಂದಿಗಳು ಕೈಜೋಡಿಸುವುದರೊಂದಿಗೆ ಅಮೋಘ ಕಾರ್ಯಾಚರಣೆ ಯಶಸ್ವಿಯಾಗಿ ವೃದ್ಧೆ ವಿಜಯಲಕ್ಷ್ಮಿ ಮತ್ತು ಪ್ರಸನ್ನ ಅವರ ಕುಟುಂಬ ರಕ್ಷಿಸಲ್ಪಟ್ಟಿತು. 

ಸಂತ್ರಸ್ತರ ಆರೋಗ್ಯ ಸಮಸ್ಯೆಗೆ ಸ್ಪಂದನ: ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಗಳಿಂದ ನಗರದ ಮೈತ್ರಿ, ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪ ಸೇರಿದಂತೆ ವಿವಿಧ ಗಂಜಿ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರ ಆರೋಗ್ಯ ಸಮಸ್ಯೆಗೆ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಸೂಕ್ತ ಸ್ಪಂದನ ನೀಡಿದೆ.
ಆರೋಗ್ಯ ಸಮಸ್ಯೆ, ಪ್ರಾಕೃತಿಕ ವಿಕೋಪದಿಂದ ಪಾರಾಗಿ ಹೊರ ಬರುವ ಹಂತದಲ್ಲಿ ಗಾಯಗಳಿಗೆ ಒಳಗಾದವರಿಗೆ ಸಂಘದಿಂದ ಉಚಿತ ಔಷಧಿಗಳನ್ನು ವಿತರಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯೂ ಕೈಜೋಡಿಸಿದೆಯೆಂದು ಸಂಘದ ಜಿಲ್ಲಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ತಿಳಿಸಿದ್ದಾರೆ.

ಸಂತ್ರಸ್ತರು: ಮಡಿಕೇರಿಯ ಪೊಲೀಸ್ ಸಮುದಾಯ ಭವನ ಮೈತ್ರಿಯಲ್ಲಿ 400 ಮತ್ತು ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ 100 ಕ್ಕೂ ಹೆಚ್ಚಿನ ಸಂತ್ರಸ್ತರಿಗೆ ಆಶ್ರಯ ನೀಡಲಾಗಿದ್ದು, ನಗರದ ವಿವಿಧ ಶಾಲೆ, ಅಂಗನವಾಡಿ ಕೇಂದ್ರಗಳಲ್ಲು ಸಂತ್ರಸ್ತರಿಗೆ ಆಶ್ರಯವನ್ನು ಒದಗಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News