ಚಿಕ್ಕಮಗಳೂರು: ವರುಣನ ಆರ್ಭಟಕ್ಕೆ ವಿರಾಮ; ಮಲೆನಾಡಿನಲ್ಲಿ ನಿಟ್ಟುಸಿರು

Update: 2018-08-18 16:46 GMT

ಚಿಕ್ಕಮಗಳೂರು, ಆ.18: ಕಳೆದ 8 ದಿನಗಳಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆ ಶನಿವಾರ ಜಿಲ್ಲೆಯಾದ್ಯಂತ ಬಿಡುವು ನೀಡಿದ್ದು, ಅಸ್ತವ್ಯಸ್ತಗೊಂಡಿದ್ದ ಮಲೆನಾಡು ಸಹಜ ಸ್ಥಿತಿಯತ್ತ ಮರಳುತ್ತಿದೆಯಾದರೂ ಮಳೆ ಸೃಷ್ಟಿಸಿದ ಅವಾಂತರಗಳಿಂದಾಗಿ ಕೆಲವು ಮನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಶುಕ್ರವಾರ ಬೆಳಗ್ಗೆಯಿಂದ ರಾತ್ರಿವರೆಗೂ ಮಲೆನಾಡಿದ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಶನಿವಾರ ಮುಂಜಾನೆಯಿಂದಲೇ ವರುಣನ ಆರ್ಭಟ ಕಡಿಮೆಯಾಗಿದೆ. ಮಲೆನಾಡಿನ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತಾದರೂ ಅಲ್ಲಲ್ಲಿ ತುಂತುರು ಮಳೆ ಹೊರತು ಪಡಿಸಿ ಭಾರೀ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಚಿಕ್ಕಮಗಳೂರು ಸೇರಿದಂತೆ ಮಲೆನಾಡು ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲು ಝಳಪಳಿಸಿತ್ತು. ಮಧ್ಯಾಹ್ನದ ಬಳಿಕ ಎಲ್ಲೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. 

8 ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಾಕಷ್ಟು ಮನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಶನಿವಾರವೂ ಮಲೆನಾಡು ವ್ಯಾಪ್ತಿಯ ಕೆಲವೆಡೆ ಮನೆ, ರಸ್ತೆ, ಬಾವಿಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದ್ದು, ಕೊಪ್ಪ ತಾಲೂಕಿನ ಹೇರೂರು ಗ್ರಾಮದ ದೂಬಳ ಕೈಮರದಿಂದ ದೂಬಲ ಎಸ್ಟೇಟ್ ಸಂಪರ್ಕದ ರಸ್ತೆಯ ತಡೆಗೋಡೆ ಸಹಿತ ಧರೆ ಕುಸಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು ಇದೇ ತಾಲೂಕು ವ್ಯಾಪ್ತಿಯ ಶಾನುವಳ್ಳಿ ಗ್ರಾಮದ ಪ್ರೇಮಾಶೆಟ್ಟಿ ಎಂಬವರ ಮನೆ ಪಕ್ಕದ ಬಾವಿಯೊಂದು ಕುಸಿದಿದ್ದು, ಬಾವಿ ಪಕ್ಕದಲ್ಲಿ ಸುರಂಗ ಉಂಟಾದ ಬಗ್ಗೆ ವರದಿಯಾಗಿದೆ.

ಇನ್ನು ಶೃಂಗೇರಿ, ಮೂಡಿಗೆರೆ, ಎನ್,ಆರ್.ಪುರ, ಚಿಕ್ಕಮಗಳೂರು, ಕಡೂರು, ತರೀಕೆರೆ ವ್ಯಾಪ್ತಿಯಲ್ಲಿ ಶನಿವಾರ ಮಳೆಯಿಂದ ಆಸ್ತಿಪಾಸ್ತಿಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಈ ತಾಲೂಕು ವ್ಯಾಪ್ತಿಯಲ್ಲಿ ಮಳೆ ಕ್ಷೀಣಗೊಂಡಿರುವುದರಿಂದ ಜನತೆ ನಿಟ್ಟುಸಿರುವ ಬಿಟ್ಟಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವರಣ ಇತ್ತು.

ಚಾರ್ಮಾಡಿ ಭಾರೀ ವಾಹನ ಸಂಚಾರ ನಿಷೇದ:
ಶಿರಾಡಿ ಘಾಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೊಟ್ಟಿಗೆಹಾರದಿಂದ ಮಂಗಳೂರು, ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮೂಲಕ ವಾಹನಗಳು ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ಸಾವಿರಾರು ವಾಹನಗಳ ಸಂಚಾರದಿಂದ ಶನಿವಾರ ಮುಂಜಾನೆಯಿಂದಲೇ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿದ್ದ ಬಗ್ಗೆ ವರದಿಯಾಗಿದೆ. 

ಕಡಿದಾದ ರಸ್ತೆಯಲ್ಲಿ ವಾಹನ ಸವಾರರು ಭಾರೀ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಿದ್ದು, ತುಂತುರು ಮಳೆ ಹಾಗೂ ಧಟ್ಟ ಮಂಜು ವಾಹನಗಳ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡಿದೆ. ಎಚ್ಚರ ತಪ್ಪಿದರೆ ಪ್ರಪಾತಕ್ಕೆ ವಾಹನಗಳು ಉರುಳುವ ಭೀತಿಯಿಂದಾಗಿ ಘಾಟಿಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿರುವುದರಿಂದ ಪದೇ ಪದೇ ಟ್ರಾಫಿಕ್ ಜಾಮ್ ಆಗುತ್ತಿದೆ ಭಾರೀ ವಾಹನಗಳೂ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪರಿಣಾಮ ಶುಕ್ರವಾರ ಟ್ರಾಫಿಕ್ ಜಾಮ್ ಆಗಿ ಪ್ರವಾಸಿಗರು ತೊಂದರೆಗೆ ಸಿಲುಕಿದ್ದರು. 

ಈ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಚಾರ್ಮಾಟಿ ಘಾಟ್ ಮೂಲಕ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ. ಸಾರಿಗೆ ಬಸ್‍ಗಳು ಹಾಗೂ ಲಘು ವಾಹನಗಳ ಸಂಚಾರಕ್ಕೆ ಘಾಟಿಯನ್ನು ಮುಕ್ತಗೊಳಿಸಲಾಗಿದೆ. ಜಿಲ್ಲೆಯ ಮೂಲಕ ಮಂಗಳೂರು ತೆರಳುವ ಭಾರೀ ವಾಹನಗಳು ಕಳಸ, ಕುದುರೆಮುಖ, ಎಸ್.ಕೆ.ಬಾರ್ಡರ್ ಮಾರ್ಗವಾಗಿ ಮಂಗಳೂರಿಗೆ ಸಂಚರಿಸಲು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News