ಮಸಗಲಿ ಮೀಸಲು ಅರಣ್ಯ ಒತ್ತುವರಿ: ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಸಭೆ

Update: 2018-08-18 16:59 GMT

ಚಿಕ್ಕಮಗಳೂರು, ಆ.18: ಮಸಗಲಿ ಮಿಸಲು ಅರಣ್ಯ  ಪ್ರದೇಶಗಳಲ್ಲಿ ಒತ್ತುವರಿ ತೆರವುಗೊಳಿಸಿ ಪುನರ್ವಸತಿ ಕಲ್ಪಿಸುವ ಸಂಬಂಧ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಎಂದು ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಸಗಲಿ ಅರಣ್ಯ ಪ್ರದೇಶದ ಒತ್ತುವರಿ ತೆರವಿನಿಂದ ನಿರಾಶ್ರಿತರಾಗಿರುವ ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದೆ. ಸುಪ್ರೀಂ ಕೋರ್ಟ್ ಮಸಗಲಿ ಮೀಸಲು ಅರಣ್ಯದ ಒತ್ತುವರಿಯನ್ನು ತೆರವುಗೊಳಿಸುವಂತೆ ಈಗಾಗಲೇ ತೀರ್ಪು ನೀಡಿದೆ. ಪಾರ್ಲಿಮೆಂಟ್‍ನಲ್ಲೂ ಕೂಡ ಈ ಕುರಿತು ಆದೇಶ ಹೊರಬಿದ್ದಿದೆ ಎಂದ ಅವರು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನಡೆಯುವಂತಿಲ್ಲ. ಸಂತ್ರಸ್ಥರ ಅಹವಾಲುಗಳನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಒತ್ತುವರಿದಾರರು ಜಿಲ್ಲಾಧಿಕಾರಿಗಳಿಗೆ ಅಹವಾಲುಗಳನ್ನು ಸಲ್ಲಿಸಿ, ನಮ್ಮನ್ನು ಬೇರೆಡೆಗೆ ತೆರವುಗೊಳಿಸದೆ ಮೀಸಲು ಅರಣ್ಯದಲ್ಲಿ ಉಳಿಸುವಂತೆ ಕೇಳಿಕೊಂಡರಲ್ಲದೇ, ಈಗಾಗಲೇ ಪ್ರತಿ ಕುಟುಂಬದವರೂ ಕೂಡ ಭೂಮಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಈಗ ಬೇರೆಡೆಗೆ ಹೋಗಿ ಎಂದರೆ ಕಷ್ಟವಾಗುತ್ತದೆ. ನಮ್ಮ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುತ್ತೇವೆ. ಸುಪ್ರೀಂ ಕೋರ್ಟ್‍ನಲ್ಲೂ ಕೂಡ ನ್ಯಾಯಕ್ಕಾಗಿ ಹೋರಾಡಲಾಗುವುದು. ಜಿಲ್ಲಾಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡಲು ಸರ್ಕಾರದ ಗಮನಕ್ಕೆ ತರಬಹುದು ಎಂದು ಹೇಳಿದರು.

ಸರಕಾರ 2017 ರ ಆಗಸ್ಟ್‍ನಲ್ಲಿ 211 ಕುಟುಂಬಗಳನ್ನು ತೆರವು ಗೊಳಿಸದ ನಂತರ ಈ ಕುಟುಂಬಗಳು ನಿರಾಶ್ರಿತರಾಗುತ್ತಾರೆಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಮಾಡಿದ ನಂತರ ಸರ್ಕಾರ 211 ಕುಟುಂಬಗಳಿಗೂ ಪ್ರತಿಯೊಂದು ಕುಟುಂಬಕ್ಕೆ ನಿವೇಶನ, ಸಾಮಾನ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಈ ಪ್ಯಾಕೇಜ್‍ನಲ್ಲಿ ಒತ್ತುವರಿ ತೆರವುದಾರರಿಗೆ ಲೇಜೌಟ್ ನಿರ್ಮಾಣ ಪುನರ್ವಸತಿ ಪ್ಯಾಕೇಜ್ ವಿಸ್ತರಿಸಿ ಅರಣ್ಯ ಒತ್ತುವರಿಯಿಂದ ತೆರವುಗೊಳಿಸುವಂತೆ ಸೂಚಿಸಿ ಒಂದು ವರ್ಷದ ಒಳಗೆ ಸೌಲಭ್ಯ ಕಲ್ಪಿಸುವಂತೆ ತಿಳಿಸಿದೆ ಎಂದರು.

ಸಭೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಎಪಿಸಿಸಿಎಫ್ ಆರ್.ಕೆ.ಸಿಂಗ್, ಜ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ, ಅರಣ್ಯ ಸಮಿಕ್ಷಣಾಧಿಕಾರಿ ಕುಮಾರ್, ಸಿಸಿಎಫ್ ವಿಜಯಮೋಹನ್ ರಾಜ್, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಅಮರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News