ಶಿವಮೊಗ್ಗ: ಪ್ರವಾಹ ಪೀಡಿತ ಪ್ರದೇಶಗಳ ಜನಜೀವನ ಸಹಜ ಸ್ಥಿತಿಗೆ; ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ ಇಳಿಕೆ
ಶಿವಮೊಗ್ಗ, ಆ. 18: ಕಳೆದೆರೆಡು ದಿನಗಳಿಂದ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶ ಸೇರಿದಂತೆ ಎಲ್ಲೆಡೆ ವರ್ಷಧಾರೆಯ ಅಬ್ಬರ ಕಡಿಮೆಯಾಗಿದೆ. ಉಕ್ಕಿ ಹರಿಯುತ್ತಿದ್ದ ಬಹುತೇಕ ಎಲ್ಲ ನದಿಗಳು ಶಾಂತವಾಗಿವೆ. ಇದರಿಂದ ಪ್ರವಾಹ ಪೀಡಿತ ಸ್ಥಳಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಹಾಗೆಯೇ ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿಯೂ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ.
ತುಂಗಾ, ಭದ್ರಾ, ಮಾಲತಿ ನದಿಗಳು ಪ್ರವಾಹ ಸೃಷ್ಟಿಸಿದ್ದ ಕಾರಣದಿಂದ ಕ್ರಮವಾಗಿ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ತಾಲೂಕಿನ ಹಲವೆಡೆ ನದಿಪಾತ್ರದ ತಗ್ಗುಪ್ರದೇಶಗಳಲ್ಲಿದ್ದ ಜನವಸತಿ ಸ್ಥಳ, ಕೃಷಿ ಜಮೀನು, ತೋಟಗಳು ಜಲಾವೃತವಾಗಿದ್ದವು. ಹಲವೆಡೆ ತಾತ್ಕಾಲಿಕ ಗಂಜಿಕೇಂದ್ರ ತೆರೆಯಲಾಗಿತ್ತು. ಇದೀಗ ನದಿಗಳ ನೀರಿನ ಹರಿವು ಕಡಿಮೆಯಾಗಿರುವುದರಿಂದ, ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ.
ಡ್ಯಾಂಗಳ ಒಳಹರಿವು: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಲಿಂಗನಮಕ್ಕಿ ಡ್ಯಾಂನ ಒಳಹರಿವು 32,473 ಕ್ಯೂಸೆಕ್‍ಗೆ ಇಳಿಕೆಯಾಗಿದೆ. ಆದರೆ ಡ್ಯಾಂನ ನೀರಿನ ಮಟ್ಟವನ್ನು 1817.20 (ಗರಿಷ್ಠ ಮಟ್ಟ : 1819) ಅಡಿಗೆ ಕಾಯ್ದುಕೊಂಡು, 51,152 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಭದ್ರಾ ಡ್ಯಾಂನ ಒಳಹರಿವು 20,765 ಕ್ಯೂಸೆಕ್ ಇದ್ದು, 25,522 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟವನ್ನು 183.60 (ಗರಿಷ್ಠ ಮಟ್ಟ:186) ಅಡಿಗೆ ಕಾಯ್ದುಕೊಳ್ಳಲಾಗಿದೆ. ಉಳಿದಂತೆ ತುಂಗಾ ಡ್ಯಾಂನ ಒಳಹರಿವು 41,271 ಕ್ಯೂಸೆಕ್ ಒಳಹರಿವಿದ್ದು, 39,450 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮಳೆ ವಿವರ: ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಅಬ್ಬರಿಸಿದ್ದ ಮಳೆಯ ಅಬ್ಬರ ಕ್ರಮೇಣ ಕಡಿಮೆಯಾಗುತ್ತಿದೆ. ಮಾಣಿಯಲ್ಲಿ 48 ಮಿ.ಮೀ., ಯಡೂರಿನಲ್ಲಿ 62 ಮಿ.ಮೀ., ಹುಲಿಕಲ್‍ನಲ್ಲಿ 46 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 68 ಮಿ.ಮೀ. ವರ್ಷಧಾರೆಯಾಗಿದೆ.
ಉಳಿದಂತೆ ತಾಲೂಕು ಕೇಂದ್ರಗಳಾದ ಶಿವಮೊಗ್ಗದಲ್ಲಿ 1.80 ಮಿ.ಮೀ., ಭದ್ರಾವತಿಯಲ್ಲಿ 2.60 ಮಿ.ಮೀ., ತೀರ್ಥಹಳ್ಳಿಯಲ್ಲಿ 13.80 ಮಿ.ಮೀ., ಸಾಗರದಲ್ಲಿ 4.40 ಮಿ.ಮೀ., ಶಿಕಾರಿಪುರದಲ್ಲಿ 2.40 ಮಿ.ಮೀ., ಸೊರಬದಲ್ಲಿ 3 ಮಿ.ಮೀ. ಹಾಗೂ ಹೊಸನಗರದಲ್ಲಿ 12.80 ಮಿ.ಮೀ. ಮಳೆಯಾಗಿದೆ.